Wednesday, April 15, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರ ನಗರಾಭಿವೃದ್ಧಿಗೆ  87 ಕೋಟಿ ಗಾತ್ರದ ಬಜೆಟ್  ಮಂಡನೆ; 1.62 ಕೋಟಿ ಉಳಿತಾಯ ಬಜೆಟ್

ದೊಡ್ಡಬಳ್ಳಾಪುರ ನಗರಾಭಿವೃದ್ಧಿಗೆ  87 ಕೋಟಿ ಗಾತ್ರದ ಬಜೆಟ್  ಮಂಡನೆ; 1.62 ಕೋಟಿ ಉಳಿತಾಯ ಬಜೆಟ್

by Raghavendra H A
0 comments

ದೊಡ್ಡಬಳ್ಳಾಪುರ; ನಗರಾಭಿವೃದ್ದಿಗಾಗಿ 2026-27ನೇ ಸಾಲಿನ ಬಜೆಟ್ ನಲ್ಲಿ ಒಟ್ಟು 87 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗುತ್ತಿದ್ದು ಈ ಪೈಕಿ ಒಟ್ಟು 1.62 ಕೋಟಿ ಗಾತ್ರದ ಉಳಿತಾಯ ಬಜೆಟ್ ಇದಾಗಿದೆ ಎಂದು ನಗರಸಭಾ ಅಧ್ಯಕ್ಷರಾದ ಸುಮಿತ್ರ ಆನಂದ್ ಅವರು ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಇಂದು ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿದ ಅವರು 87.83 ಕೋಟಿ ಬಜೆಟ್ ನಲ್ಲಿ ಖರ್ಚನ್ನು 86.20 ಕೋಟಿ ಎಂದು ಅಂದಾಜಿಸಲಾಗಿದ್ದು, 1.62 ಕೋಟಿ ಉಳಿತಾಯದ ಬಜೆಟ್ ನ್ನು ಇಂದು ಮಂಡನೆ ಮಾಡಲಾಗಿದೆ. ನಗರಸಭೆಯ ಆದಾಯ ಮೂಲಗಳಿಗೆ ಒತ್ತು ನೀಡಿ, ನಗರ  ಸ್ವಚ್ಛತೆಗೆ ಆದ್ಯತೆ ನೀಡಿ ಜ್ವಲಂತ ಸಮಸ್ಯೆಗಳಿಗೆ  ಸ್ಪಂದಿಸುವ ಬಜೆಟ್ ಮಂಡಿಸಲಾಗಿದೆ. ನಾಗರೀಕರ ಸಮಸ್ಯೆಗಳನ್ನು  ಪರಿಹರಿಸುವಲ್ಲಿ ನಗರದ ಆದಾಯ ತೆರಿಗೆ, ಸರಕಾರದ ಅನುದಾನಗಳ ಮೂಲಕ ಮೂಲ ಸೌಕರ್ಯ ಒದಗಿಸುವ ಜತೆಗೆ ಅಭಿವೃದ್ದಿಗೂ ಕೂಡ ಆದ್ಯತೆ ನೀಡಲಾಗಿದೆ ಎಂದರು.

ನಗರದ ನೈರ್ಮಲ್ಯಕ್ಕೆ ಬಜೆಟ್‌ನಲ್ಲಿ ಅನುದಾನ:

ನಗರದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಿ, ಸಂರಕ್ಷಿಸುವ ಸಲುವಾಗಿ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ರೂ.2 ಕೋಟಿ ಮತ್ತು ಉದ್ಯಾನವನಗಳ ನಿರ್ವಹಣೆಗಾಗಿ ರೂ.20 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಸುಂದರ, ಸ್ವಚ್ಛ ಹಾಗೂ ನಿರ್ಮಲ ನಗರವನ್ನಾಗಿಸುವ ದೃಷ್ಟಿಯಿಂದ ನಗರ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ 4.10 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಸಿ ಮತ್ತು ಡಿ ಕಸ ಸಂಸ್ಕರಣಾ ಘಟಕ ಹಾಗೂ ಒಣಕಸ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಮತ್ತು ಪಾರಂಪರಿಕ ತ್ಯಾಜ್ಯ ವಿಲೆವಾರಿಗಾಗಿ 3.27 ಕೋಟಿ ಅನುದಾನ. ಸ್ವಚ್ಚ ಭಾರತ್ ಮಿಷನ್-2 ಯೋಜನೆಯಲ್ಲಿ ವಡ್ಡರಪಾಳ್ಯದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಗ್ರಹವಾಗಿರುವ 46,000 ಟನ್ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿಗಾಗಿ 4.77 ಕೋಟಿ ಅನುದಾನವನ್ನು ನಿಗದಿ ಮಾಡಲಾಗಿದೆ.

ಬಜೆಟ್‌ನಲ್ಲಿ ಮಿನಿ ಮಾರುಕಟ್ಟೆ ಘೋಷಣೆ:

ನಗರಸಭೆ ಬಜೆಟ್‌ನಲ್ಲಿ ಕೆ.ಆರ್ ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ 3 ಕೋಟಿ ಅನುದಾನ ಅಂದಾಜಿಸಲಾಗಿದೆ. ಸ್ಮಾರ್ಟ್ ಮಾರುಕಟ್ಟೆ ಮತ್ತು ಫುಡ್ ಕೋರ್ಟ್ಗಳ ನಿರ್ಮಾಣಕ್ಕೆ 3 ಕೋಟಿ. ನೇಕಾರರ ಭವನ  ನಿರ್ಮಿಸಲು 10 ಲಕ್ಷ, ನಗರಸಭಾ ಕಚೇರಿಯ ಹಾಗೂ ಡಾ. ರಾಜಕುಮಾರ್ ಕಲಾಮಂದಿರದ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಕೆಗೆ 60 ಲಕ್ಷ ರೂ.ಅನುದಾನ ರೊಚ್ಚು ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಸ್ವಾಧೀನಕ್ಕಾಗಿ  2.50 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

10,000 ಕುಡಿಯುವ ನೀರಿನ ನಳ ಸಂಪರ್ಕ:

ನಗರದ ಜನರಿಗೆ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸಲು ಸುಮಾರು 10,000 ಕುಡಿಯುವ ನೀರಿನ ನಳ ಸಂಪರ್ಕವನ್ನು ಸಾರ್ವಜನಿಕರಿಗೆ ಒದಗಿಸಲು ಅಮೃತ 2.0 ಯೋಜನೆಯಡಿಯಲ್ಲಿ 10 ಕೋಟಿಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಫ್ರೋತ್ಸಾಹ ಧನ ನೀಡಲು 10 ಲಕ್ಷ ಅನುದಾನ ಮೀಸಲಿಡಲಾಗಿದೆ.

ನಗರದ ಒಳಚರಂಡಿ ರೊಚ್ಚು ನೀರನ್ನು ಅಧುನಿಕ ರೀತಿಯಲ್ಲಿ ಸಂಸ್ಕರಿಸಿ ಶುದ್ದೀಕರಿಸಲು ಎಸ್.ಟಿ.ಪಿ ನಿರ್ಮಾಣಕ್ಕೆ 4.77 ಕೋಟಿ ಅನುದಾನ ತೆಗೆದಿಡಲಾಗಿದೆ.

ಈ ಬಾರಿ 87 ಕೋಟಿಗಳಷ್ಟು ಭಾರಿ ಬಜೆಟ್ ನ್ನು ಮಂಡಣೆ ಮಾಡಲಾಗಿದ್ದು ಈ ಬಾರಿಯಾದರೂ 95.5 ರಷ್ಟು ಪರಿಶಿಷ್ಟ ಜನಾಂಗದವರೇ ಇರುವ ನಮ್ಮ ಕಚೇರಿಪಾಳ್ಯ ವಾರ್ಡ್ ಗೆ ಶೇ.24.10% ರ ಅನುದಾನದಲ್ಲಿ ಹೆಚ್ಚನ ಹಣವನ್ನು ಬಿಡುಗಡೆ ಮಾಡಿ ನಮ್ಮ ವಾರ್ಡ್ ಅಭಿವೃದ್ದಿಗೆ ಸಹಕರಿಸಬೇಕು.

-ರೂಪಿಣಿ ಮಂಜುನಾಥ್.ಟಿ ಕಾಂಗ್ರೆಸ್ ಸದಸ್ಯರು.

 

ದೂರದೃಷ್ಟಿ ಇಲ್ಲದೆ ವಾಸ್ತವಕ್ಕೆ ದೂರವಾದ ಬಜೆಟ್. ಹಿಂದಿನ ವರ್ಷದ ಘೋಷಣೆಗಳು ಕಾರ್ಯಗತವಾಗಿಲ್ಲ. ಒಟ್ಟಾರೆ ನಿರಾಶಾಯದಾಯಕ ಬಜೆಟ್ ಆಗಿದೆ .

 

– ಚಂದ್ರಮೋಹನ್, ಕಾಂಗ್ರೆಸ್ ಸದಸ್ಯ.

ಈ ಬಾರಿ ದೊಡ್ಡಬಳ್ಳಾಪುರ ನಗರಸಭೆಯ 87 ಕೋಟಿ ಬಜೆಟ್ ಮಂಡಿಸಲಾಗಿದೆ. ಈ ಬಗ್ಗೆ ತೃಪ್ತಿಕರವಾಗಿದೆ. ಸರಕಾರದ ಹೆಚ್ಚಿನ ಅನುದಾನ ನೀಡಬೇಕು. ತೆರಿಗೂ ಕೂಡ ಸಮಪರ್ಕವಾಗಿ ಸಂಗ್ರಹಿಸಬೇಕು.

– ಮಲ್ಲೇಶ್ | ಉಪಾಧ್ಯಕ್ಷ, ದೊಡ್ಡಬಳ್ಳಾಪುರ ನಗರಸಭೆ.

ಈ ವೇಳೆ ಪೌರಾಯುಕ್ತ ಕಾರ್ತಿಕೇಶ್ವರ, ಉಪಾಧ್ಯಕ್ಷ ಮಲ್ಲೇಶ, ಸದಸ್ಯರಾದ ಪದ್ಮನಾಭ, ಶಿವು, ತ.‌ನ ಪ್ರಭುದೇವ, ಎಂಜಿ ಶ್ರೀನಿವಾಸ್, ರವಿ, ಹಂಸಪ್ರಿಯ,  ಸುಧಾರಾಣಿ, ಕಾಂತರಾಜು, ನಾಗರತ್ನಮ್ಮ, ಇಂದ್ರಾಣಿ, ಅಖಿಲೇಶ್,  ನಾಗರಾಜು, ನಾಗವೇಣಿ, ಸುರೇಶ್,ನವೀನ್, ಕೆ. ಮಂಜುಳ, ಪ್ರಭಾ ಸೇರಿದಂತೆ ಅಧಿಕಾರಿಗಳು ಮತ್ತಿತ್ತರರು ಇದ್ದರು.

You may also like

Leave a Comment