ಬೆಂಗಳೂರು: ರಾಜ್ಯದ ಅತಿ ದೊಡ್ಡ ಕಾರಾಗೃಹವಾದ ಪರಪ್ಪನ ಅಗ್ರಹಾರದಲ್ಲಿ ಅವ್ಯವಹಾರಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಇತ್ತೀಚೆಗಷ್ಟೇ ಕೈದಿಗಳು ಜೈಲಿನಲ್ಲೇ ಕೂತು ವಿಡಿಯೋ ಮಾಡಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾದ ಬೆನ್ನಲ್ಲೇ, ಈಗ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಕಳ್ಳಸಾಗಣೆ ಮಾಡಲು ಯತ್ನಿಸಿದ 27 ವರ್ಷದ ಯುವತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಕಳೆದ ಗುರುವಾರ ಸಂಜೆ 4 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ವಿಚಾರಣಾಧೀನ ಕೈದಿ ಫರ್ಹಾನ್ ಖಾನ್ ಎಂಬಾತನನ್ನು ಭೇಟಿ ಮಾಡಲು ರಿತಿಕಾ ರೈ ಎಂಬ ಯುವತಿ ಮಾನ್ಯ ಪಾಸ್ ಪಡೆದು ಜೈಲಿಗೆ ಬಂದಿದ್ದಳು.
ಸಾಮಾನ್ಯ ಭೇಟಿಯ ವಿಭಾಗದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾಗ ರಿತಿಕಾ ವರ್ತನೆ ಅನುಮಾನ ಮೂಡಿಸಿದೆ. ಕೂಡಲೇ ಆಕೆಯನ್ನು ತೀವ್ರವಾಗಿ ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ.
ಸಿಮ್ ಕಾರ್ಡ್ ಮತ್ತು ತಂಬಾಕು ಪತ್ತೆ
ಬಂಧಿತ ಯುವತಿ ರಿತಿಕಾ ರೈ ತನ್ನ ದೇಹದ ಖಾಸಗಿ ಭಾಗದಲ್ಲಿ ತಂಬಾಕು ಪದಾರ್ಥಗಳ ಮೂರು ಪ್ಯಾಕೆಟ್‌ಗಳು ಹಾಗೂ ಏರ್ಟೆಲ್ 5ಜಿ (Airtel 5G) ಸಿಮ್ ಕಾರ್ಡ್‌ಗಳನ್ನು ಬಚ್ಚಿಟ್ಟುಕೊಂಡು ಜೈಲಿನೊಳಗೆ ಕೊಂಡೊಯ್ಯಲು ಯತ್ನಿಸಿದ್ದಳು.
ತಪಾಸಣೆ ವೇಳೆ ಸಿಕ್ಕಿಬಿದ್ದ ಆಕೆಯನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೈಲಿನಲ್ಲಿ ಮೊಬೈಲ್ ಮತ್ತು ಮಾದಕ ವಸ್ತುಗಳ ಬಳಕೆಗೆ ನಿಷೇಧವಿದ್ದರೂ ಈ ರೀತಿ ಗುಪ್ತವಾಗಿ ಸಾಗಿಸಲು ಯತ್ನಿಸಿರುವುದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.
ಜೈಲು ಅಧೀಕ್ಷಕರು ನೀಡಿದ ದೂರಿನ ಮೇರೆಗೆ ರಿತಿಕಾ ರೈ ಮತ್ತು ಕೈದಿ ಫರ್ಹಾನ್ ಖಾನ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ 2022 ಮತ್ತು ಬಿಎನ್‌ಎಸ್ ಸೆಕ್ಷನ್ 323ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಡಿಜಿಪಿ ಅಲೋಕ್ ಕುಮಾರ್ ಅವರ ಕಣ್ಗಾವಲಿನ ನಡುವೆಯೂ ಇಂತಹ ಕಿಡಿಗೇಡಿಗಳು ಜೈಲಿನ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.