ಬೆಳಗಾವಿ: ಜಿಲ್ಲೆಯ ಯಮಕನಮರಡಿ ಸಮೀಪದ ಹಳೆ ಗುಡಗನಟ್ಟಿ ಗ್ರಾಮದ ಬಳಿ ಇರುವ ಘಟಪ್ರಭಾ ನದಿಯ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟ ದುರದೃಷ್ಟಕರ ಘಟನೆ ನಡೆದಿದೆ.
ಕೃಷ್ಣ ವಿಠ್ಠಲ್ ಖಾನಾಪುರಿ (14) ಮತ್ತು ಪ್ರಜ್ವಲ್ ಗೋಕಾರ್ (13) ಇಬ್ಬರು ಮೃತ ದುರ್ದೈವಿಗಳು.
ಐವರು ಸ್ನೇಹಿತರ ಗುಂಪು ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಈಜಲು ಹೋದಾಗ ಈ ಅವಘಡ ಸಂಭವಿಸಿದೆ. ಈ ಇಬ್ಬರೂ ಬಾಲಕರು ಹಳೆ ಗುಡಗನಟ್ಟಿ ಗ್ರಾಮದ ನಿವಾಸಿಗಳಾಗಿದ್ದು, ಆಟವಾಡುತ್ತಾ ನದಿಗೆ ಇಳಿದಾಗ ನೀರಿನ ಆಳ ತಿಳಿಯದೇ ಮುಳುಗಿ ಸಾವನ್ನಪ್ಪಿದ್ದಾರೆ.
ಯಮಕನಮರಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ಇಬ್ಬರು ಬಾಲಕರ ಮೃತದೇಹ ಹೊರ ತೆಗೆಯಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
#ಪೋಷಕರೆ_ಎಚ್ಚರ#
ಪ್ರತಿ ಬೇಸಿಗೆ ರಜೆಯಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿವೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಜಾಗೃತಿಯಿಂದ ನೋಡಿಕೊಳ್ಳಿ, ಮಕ್ಕಳು ಈಜಲು ಹೋಗುವುದಾದರೆ, ಅವರನ್ನ ನಿಮ್ಮ ಬಿಡುವಿನ ವೇಳೆಯಲ್ಲಿ ಕರೆದೊಯ್ಯಿರಿ. ಮಕ್ಕಳು ನೀರಿಗೆ ಇಳಿಯುವ ಮುನ್ನ ಎಚ್ಚರವಿರಲಿ.
#ಜೀವ ಅಮೂಲ್ಯ#