Saturday, July 11, 2026
Home ಜಿಲ್ಲಾ‌ಸುದ್ದಿಆಟವಾಡುತ್ತಿದ್ದ 1ನೇ ತರಗತಿ ಬಾಲಕ ಕುಸಿದು ಬಿದ್ದು ಸಾ*ವು!

ಆಟವಾಡುತ್ತಿದ್ದ 1ನೇ ತರಗತಿ ಬಾಲಕ ಕುಸಿದು ಬಿದ್ದು ಸಾ*ವು!

by Dharmaraju
0 comments

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದ್ದು, ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಆರು ವರ್ಷದ ಪುಟಾಣಿ ಬಾಲಕನೊಬ್ಬ ಹೃದಯಾಘಾತದಿಂದ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಜಿಲ್ಲೆಯ ಕರೂರು ಹೋಬಳಿಯ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರ್ದೈವಿ ಘಟನೆ ನಡೆದಿದೆ. ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಮತ್ತು ಶಿಲ್ಪಾ ದಂಪತಿಯ ಪ್ರೀತಿಯ ಪುತ್ರ ತ್ರಿಲೋಕ್ ಜೈನ್ (6) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ.

ಶನಿವಾರ ಎಂದಿನಂತೆ ಉತ್ಸಾಹದಿಂದಲೇ ಶಾಲೆಗೆ ಬಂದಿದ್ದ ಒಂದನೇ ತರಗತಿಯ ವಿದ್ಯಾರ್ಥಿ ತ್ರಿಲೋಕ್, ದಿನವಿಡೀ ಸಹಪಾಠಿಗಳೊಂದಿಗೆ ಸಕ್ರಿಯನಾಗಿ ಆಟವಾಡಿಕೊಂಡಿದ್ದನು. ಆದರೆ ಮಧ್ಯಾಹ್ನ ಶಾಲಾ ಅವಧಿ ಮುಗಿಯುವ ಕೆಲವೇ ನಿಮಿಷಗಳ ಮೊದಲು, ಶಾಲಾ ಆವರಣದಲ್ಲಿ ಗೆಳೆಯರೊಂದಿಗೆ ಇರುವಾಗ ಆತ ಏಕಾಏಕಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ.

ಬಾಲಕ ತಕ್ಷಣವೇ ನೆಲಕ್ಕೆ ಬಿದ್ದದ್ದನ್ನು ನೋಡಿ ಆತಂಕಗೊಂಡ ಸಹಪಾಠಿಗಳು ತಕ್ಷಣವೇ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಗಾಬರಿಗೊಂಡ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ತಕ್ಷಣವೇ ಬಾಲಕನ ಬಳಿ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯದಲ್ಲೇ ಆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ.

ಆಸ್ಪತ್ರೆಗೆ ತಲುಪಿದಾಗ ವೈದ್ಯರು ಬಾಲಕ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದ್ದು, ಮಗುವಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆಯಷ್ಟೇ ಆರೋಗ್ಯವಾಗಿ, ಹಸನ್ಮುಖಿಯಾಗಿ ಶಾಲೆಗೆ ಕಳುಹಿಸಿದ್ದ ಮಗ ಹೆಣವಾಗಿ ಮರಳಿರುವುದನ್ನು ಕಂಡು ಪೋಷಕರು ಜರ್ಜರಿತರಾಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಮಕ್ಕಳಲ್ಲಿಯೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದ ಬೆನ್ನಲ್ಲೇ, ಈಗ ಕೇವಲ 6 ವರ್ಷದ ಶಾಲಾ ಬಾಲಕನೂ ಹೃದಯಾಘಾತದಂತಹ ಲಕ್ಷಣಗಳಿಂದ ಸಾವನ್ನಪ್ಪಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕ ಮತ್ತು ಭೀತಿಯನ್ನು ಮೂಡಿಸಿದೆ. ತರಗತಿಯಲ್ಲಿ ಎಲ್ಲರ ಮುದ್ದಿನ ವಿದ್ಯಾರ್ಥಿಯಾಗಿದ್ದ ತ್ರಿಲೋಕ್ ಜೈನ್ ಸಾವಿಗೆ ಹಾಳಸಸಿ ಹಾಗೂ ಕೊಡನವಳ್ಳಿ ಗ್ರಾಮಸ್ಥರು, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಪದಾಧಿಕಾರಿಗಳು ಹಾಗೂ ಶಾಲೆಯ ಶಿಕ್ಷಕ ವೃಂದ ತೀವ್ರ ಸಂತಾಪ ಸೂಚಿಸಿದ್ದಾರೆ.

You may also like

Leave a Comment