ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಮಧ್ಯರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದ ಎಂ.ಎಸ್ಸಿ ಕೃಷಿ (M.Sc Agriculture) ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರಾದ ಆಕಾಶ್ (23) ಮೃತಪಟ್ಟ ದುರ್ದೈವಿ. ರೈತಾಪಿ ಕುಟುಂಬದಿಂದ ಬಂದು, ಕಷ್ಟಪಟ್ಟು ಓದಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರತಿಭಾವಂತ ಯುವಕನ ಅಕಾಲಿಕ ಮರಣ ಇಡೀ ಕ್ಯಾಂಪಸ್ ಅನ್ನು ಕಣ್ಣೀರಲ್ಲಿ ಮುಳುಗಿಸಿದೆ.
ಮಧ್ಯರಾತ್ರಿ ನಡೆದಿದ್ದೇನು?
ಮೂಲಗಳ ಪ್ರಕಾರ, ಈ ಘಟನೆಯು ರಾತ್ರಿ 12:00 ರಿಂದ 1:00 ಗಂಟೆಯ ಅವಧಿಯಲ್ಲಿ ಜಿಕೆವಿಕೆ ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿ ಆಕಾಶ್ ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳುವ ಆಸೆಯಿಂದ ದೊಡ್ಡ ಮರವನ್ನು ಹತ್ತಿದ್ದ ಎನ್ನಲಾಗಿದೆ.
ಆದರೆ, ಮಧ್ಯರಾತ್ರಿಯ ಕತ್ತಲಿನಲ್ಲಿ ಆಯತಪ್ಪಿ ಮರದ ಮೇಲಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ.ಕೆಳಗೆ ಬಿದ್ದ ರಭಸಕ್ಕೆ ಆಕಾಶ್ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರವಾದ ಪೆಟ್ಟಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಆಕಾಶ್ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಸಹಪಾಠಿಗಳು ತಕ್ಷಣವೇ ಆತನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಸಾವನ್ನಪ್ಪಿದ್ದಾನೆ.
ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪ್ರತಿಭಾವಂತ ಯುವಕ!
ಮೃತ ಆಕಾಶ್ ಕೇವಲ ಓದಿನಲ್ಲಿ ಮಾತ್ರವಲ್ಲದೆ ಇತರೆ ಚಟುವಟಿಕೆಗಳಲ್ಲೂ ಅತ್ಯಂತ ಮುಂಚೂಣಿಯಲ್ಲಿದ್ದ ಕೃಷಿ ವಿಶ್ವವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿಯಾಗಿದ್ದನು.
ಸಾಧನೆಯ ಶಿಖರ ಏರಿದ್ದ ಆಕಾಶ್:
ಕಾಲೇಜಿನ ಎನ್.ಎಸ್.ಎಸ್ (NSS) ವಿಭಾಗದಲ್ಲಿ ಅತ್ಯುತ್ತಮ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಈತನಿಗೆ ರಾಷ್ಟ್ರಪತಿಯವರಿಂದ “ಉತ್ತಮ ಸ್ವಯಂಸೇವಕ” ಪ್ರಶಸ್ತಿ ಲಭಿಸಿತ್ತು.
2024 ರ ಗಣರಾಜ್ಯೋತ್ಸವದ (Republic Day Parade) ಪರೇಡ್‌ನಲ್ಲಿ ಕರ್ನಾಟಕ ರಾಜ್ಯವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಕೀರ್ತಿ ತಂದಿದ್ದನು.
ಬಡತನದ ಹಿನ್ನೆಲೆಯುಳ್ಳ ರೈತ ಕುಟುಂಬದಿಂದ ಬಂದಿದ್ದ ಆಕಾಶ್, ಇಡೀ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಆಸರೆಯಾಗಬೇಕಿದ್ದನು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಹಲಸಿನ ಹಣ್ಣಿನ ಸಣ್ಣ ಆಸೆಗೆ ಸಿಲುಕಿ ಈ ಯುವಕ ಪ್ರಾಣ ಕಳೆದುಕೊಂಡಿರುವುದು ಹೆತ್ತವರಿಗೆ ಹಾಗೂ ಸ್ನೇಹಿತರಿಗೆ ಅರಗಿಸಿಕೊಳ್ಳಲಾಗದ ತೀವ್ರ ಆಘಾತವನ್ನುಂಟು ಮಾಡಿದೆ.
ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಯಲಹಂಕ ಪೊಲೀಸ್ ಠಾಣೆಯ ಅಧಿಕಾರಿಗಳು ಜಿಕೆವಿಕೆ ಆವರಣದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಮೃತರ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.