ಮಹದೇವಪುರ: ಕ್ಷೇತ್ರದ ವರ್ತೂರು ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರವನ್ನು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ರಸ್ತೆ ಅಗಲೀಕರಣ ತೆರವುಗೊಳಿಸಲಾದ ದೇವಾಲಯಗಳು, ಮಸೀದಿಗಳು ಹಾಗೂ ಶಾಲಾ ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಶಾಸಕರು ಸ್ಥಳೀಯ ಮುಖಂಡರುಗಳೊಂದಿಗೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಶ್ರೀರಾಮ ದೇವಸ್ಥಾನ (ಗುಂಜೂರು), ಶ್ರೀ ದೌಪದಮ್ಮಧರ್ಮರಾಯಸ್ವಾಮಿ ದೇವಸ್ಥಾನದ ಆರ್ಚ್ ನಿರ್ಮಾಣ, ಯಮಲೂರು ಕೊಡಿ ಶ್ರೀ ದುಗ್ಗಲಮ್ಮ ದೇವಿ ದೇವಸ್ಥಾನ ನಿರ್ಮಾಣ ಸೇರಿದಂತೆ ಹಲವಾರು ಧಾರ್ಮಿಕ ಸ್ಥಳಗಳ ನಿರ್ಮಾಣ ಹಾಗೂ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಜೊತೆಗೆ ವರ್ತೂರು ಹಾಗೂ ಬೆಳ್ಳಂದೂರು ಮಸೀದಿ ನಿರ್ಮಾಣಕ್ಕೂಶಂಕುಸ್ಥಾಪನೆ ಮಾಡಲಾಯಿತು.
ವರ್ತೂರು ಜೂನಿಯರ್ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ ಹೊಸ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಾಗಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ವರ್ತೂರು ಹೊಸ ಮಾರ್ಕೆಟ್ನ ಉಳಿಕೆ ಕಾಮಗಾರಿಗಳು ಹಾಗೂ ವರ್ತೂರು-ಸೋರಹುಣಸೆ ರಸ್ತೆಯ ಅಭಿವೃದ್ಧಿಗೂ ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ ಮಾತನಾಡಿ ವರ್ತೂರು ಮುಖ್ಯರಸ್ತೆ ಅಗಲೀಕರಣ ಯೋಜನೆಯ ಭಾಗವಾಗಿ ಕೆಲವು ದೇವಸ್ಥಾನಗಳು, ಮಸೀದಿಗಳು, ಶಾಲೆ ಹಾಗೂ ಕಾಲೇಜು ಕಟ್ಟಡಗಳನ್ನು ಸ್ಥಳಾಂತರಿಸಬೇಕಾಗಿತ್ತು. ಇದಕ್ಕಾಗಿ ಸಿಎಸ್‌ಆರ್ ಅನುದಾನದಡಿ ಪ್ರೆಸ್ಟೀಜ್ ಸಂಸ್ಥೆ ಮುಂದಾಗಿ ನೂತನ ಕಟ್ಟಡಗಳನ್ನು ನಿರ್ಮಿಸುತ್ತಿದೆ.ಸಾರ್ವಜನಿಕರ ಅನುಕೂಲವಾಗುವಂತೆ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯವೂ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್ ಮುಖಂಡರಾದ ಮನೋಹರ್‌ರೆಡ್ಡಿ, ಮಹೇಂದ್ರಮೋದಿ,ವರ್ತೂರು ಶ್ರೀಧರ್, ರಾಜಾ ರೆಡ್ಡಿ,ವಿ.ಪಿ.ರಕ್ಷೀತ್,ರಾಜೇಶ್,ವೆಂಕಟೇಶ್ ಉಪಸ್ಥಿತರಿದ್ದರು

ಸರ್ಕಾರಿ ಪ್ರಾಥಮಿಕ ಶಾಲೆಯ ಹೊಸ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ