14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು, ತಾಯಿ ಆತ್ಮಹತ್ಯೆಗೆ ಶರಣು!
ವೈಟ್ ಫೀಲ್ಡ್: ಮಹಿಳೆಯೊಬ್ಬರು ತನ್ನ 14 ವರ್ಷದ ಮುದ್ದಾದ ಮಗಳನ್ನು ಉಸಿರು ಕಟ್ಟಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. 14 ವರ್ಷದ ಮಗಳು ಕಾರುಣ್ಯಳನ್ನು ತಾಯಿ ಸುವರ್ಣ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗೆ ತಾಯಿ-ಮಗಳ ಮೃತದೇಹ ರವಾನಿಸಲಾಗಿದೆ.
ಮೃತ ಸುವರ್ಣ ಗಂಡ ಚಂದ್ರಶೇಖರ್ಗೆ ಇತ್ತೀಚೆಗೆ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಆಗಿತ್ತು, ಖರ್ಚು ವೆಚ್ಚಕ್ಕೆ ಹಣಕಾಸು ಕೊರತೆ ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದ ಸುವರ್ಣ ಮಗಳನ್ನು ಕೊಂದು ನೇಣಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಬಗ್ಗೆ ಮೃತ ಸುವರ್ಣ ಅಕ್ಕ ಉಷಾ ಅವರು ಈ ಬಗ್ಗೆ ಮಾತನಾಡಿ, ಹಣಕಾಸು ವಿಚಾರಕ್ಕೆ ಸುವರ್ಣ ಬೇಜಾರಾಗಿ ಖಿನ್ನತೆಗೆ ಒಳಗಾಗಿದ್ದಳು, ನಮ್ಮ ಮನೆ ಅತ್ತಿಬೆಲೆಗೆ ಫ್ರೀ ಬಸ್ಸ್ ಟಿಕೆಟ್‌ನಲ್ಲಿ ಬರುತ್ತಿದ್ದಳು. ಹಣಕಾಸು ಬಗ್ಗೆ ನನಗೆ ಆಗಾಗ್ಗೆ ಹೇಳುತ್ತಿದ್ದಳು, ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಮಗಳನ್ನು ಸಾಯಿಸಿದ್ದು ತುಂಬಾ ಬೇಜಾರಾಗಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಮೃತ ಸುವರ್ಣ ಅಕ್ಕ ಉಷಾ ಆಗ್ರಹಿಸಿದ್ದಾರೆ.