ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರೀತಿ ಎಂಬುದು ಕುಟುಂಬಗಳ ನಿದ್ದೆ ಗೆಡಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪರಿಚಯ, ಈಗ 21ರ ಯುವಕನನ್ನು 40ರ ವಿಧವೆಯ ಜೊತೆ ಮನೆ ಬಿಟ್ಟು ಓಡಿಹೋಗುವಂತೆ ಮಾಡಿದೆ!
ಹೌದು…ಇದು ಡಿಜಿಟಲ್ ಕಾಲದ ವಿಚಿತ್ರ ಪ್ರೇಮ ಕಥೆ. ಉತ್ತರ ಪ್ರದೇಶದ ಅಮೋಹಾದ 21 ವರ್ಷದ ಯುವಕನಿಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಾದ 40 ವರ್ಷದ ಮಹಿಳೆಯ ಪರಿಚಯವಾಗುತ್ತದೆ. ಆರಂಭದಲ್ಲಿ ಹಾಯ್, ಹಲೋ ಅಂತ ಶುರುವಾದ ಚಾಟಿಂಗ್, ಕಡೆಗೆ ಬಿಟ್ಟಿರಲಾರದ ಪ್ರೇಮಕ್ಕೆ ತಿರುಗಿದೆ. ತನ್ನ ಮಗನಿಗಿಂತ 19 ವರ್ಷ ಹಿರಿಯವಳಾದ, ಮೂರು ಮಕ್ಕಳ ತಾಯಿಯ ಪ್ರೇಮದ ಜಾಲಕ್ಕೆ ಬಿದ್ದ ಈ ತರುಣ, ಮನೆಯವರಿಗೂ ತಿಳಿಸದೆ ಹಠಾತ್ ನಾಪತ್ತೆಯಾಗಿದ್ದ. ಮಗ ಕಾಣೆಯಾಗಿದ್ದಾನೆಂದು ಗಾಬರಿಗೊಂಡ ತಾಯಿ ಪೊಲೀಸರ ಮೊರೆ ಹೋದಾಗ ಬಯಲಾಗಿದ್ದು ಮಾತ್ರ ಶಾಕಿಂಗ್ ವಿಷಯ!
ಪೊಲೀಸರು ಹುಡುಕಾಟ ನಡೆಸಿದಾಗ ಆ ಯುವಕ ಆಗ್ರಾದಲ್ಲಿ ಆ 40 ವರ್ಷದ ಮಹಿಳೆಯ ಜೊತೆ ಪತ್ತೆಯಾಗಿದ್ದಾನೆ. ಅಷ್ಟೇ ಅಲ್ಲ, ಇವರಿಬ್ಬರು ಯಾರಿಗೂ ತಿಳಿಯದಂತೆ ದೇವಸ್ಥಾನದಲ್ಲಿ ಮದುವೆಯನ್ನೂ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಗನನ್ನು ಮನೆಗೆ ಕರೆದೊಯ್ಯಲು ಬಂದ ತಾಯಿಯ ಎದುರೇ ದೊಡ್ಡ ಹೈಡ್ರಾಮಾ ನಡೆದಿದ್ದು, ಮಗ ಮಾತ್ರ ತನ್ನ ಪ್ರೇಮಿಯನ್ನು ಬಿಟ್ಟು ಬರಲು ಸಿದ್ಧನಿಲ್ಲ.
ಹೌದು, ಆನ್‌ಲೈನ್‌ನಲ್ಲಿ ಸಿಗುವ ಆಕರ್ಷಣೆ ಜೀವನದ ವಾಸ್ತವಕ್ಕಿಂತ ಭಿನ್ನವಾಗಿರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 19 ವರ್ಷದ ವಯಸ್ಸಿನ ಅಂತರವಿದ್ದರೂ ಸಮಾಜದ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಈ ಜೋಡಿಯ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.