Tuesday, May 19, 2026
Home ಬೆಂಗಳೂರು ನಗರರಾಜಧಾನಿ ಮರಣ ಮಳೆಗೆ 7 ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ

ರಾಜಧಾನಿ ಮರಣ ಮಳೆಗೆ 7 ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ

by Dharmaraju
0 comments

ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಅವರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ಮೃತರಾದಂತವರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು.
ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿತಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ. ಕಾಂಪೌಂಡ್ ಗೋಡೆ ಕುಸಿತಕ್ಕೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಬೀದಿ ಬದಿಯ ವ್ಯಾಪಾರಿಗಳು ಮಳೆಯಿಂದಾಗಿ ಕಾಂಪೌಂಡ್ ಗೋಡೆಯ ಬಳಿಯಲ್ಲಿ ಆಶ್ರಯ ಪಡೆದುಕೊಳ್ಳಲು ನಿಂತಿದ್ದರು. ಈ ಸಂದರ್ಭದಲ್ಲಿ ಕುಸಿತಗೊಂಡು ದುರ್ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಪರಿಹಾರವನ್ನು ನೀಡುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದರು.

ಸ್ಥಳದಲ್ಲೇ ತನಿಖೆಗೆ ಆದೇಶ
ಘಟನಾ ಸ್ಥಳದಲ್ಲಿ ಅವಶೇಷಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಯವರು, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡರು. ವ್ಯಾಪಾರ ಮಾಡುತ್ತಿದ್ದವರ ಮೇಲೆ ಗೋಡೆ ಕುಸಿದು ಅಮಾಯಕರು ಬಲಿಯಾದ ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ದುರಂತಕ್ಕೆ ಕಾರಣವೇನು ಎಂಬುದರ ಕುರಿತು ತಕ್ಷಣವೇ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದರು.

ಅಧಿಕಾರಿಗಳಿಗೆ ಸಿಎಂ ತರಾಟೆ
“ಏನು ಕ್ರಮಕೈಗೊಂಡಿದ್ದೀರಿ? ಹಳೆಯ ಗೋಡೆ ಎಂದು ನೋಡಲು ಆಗುವುದಿಲ್ಲವೇ? ನಿಮ್ಮ ಮಧ್ಯೆ ಸಮನ್ವಯತೆ (Co-ordination) ಇರುವುದಿಲ್ಲವೇ?” ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಮತ್ತು ಆಸ್ಪತ್ರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ನೀವು ಮೊದಲೇ ಎಚ್ಚರವಹಿಸಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು. ನಿಮ್ಮ ನಿರ್ಲಕ್ಷ್ಯದಿಂದಾಗಿ ಇಂದು ಕುಟುಂಬಗಳು ಬೀದಿಗೆ ಬಂದಿವೆ” ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಸರ್ಕಾರದಿಂದ ಚಿಕಿತ್ಸೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

You may also like

Leave a Comment