ಹಾಸನ: ವಿಧಿ ಎಂಬುದು ಎಷ್ಟು ಕ್ರೂರ ಎಂಬುದಕ್ಕೆ ಹಾಸನ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇನ್ನೇನು ಐದಾರು ದಿನಗಳಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನೊಬ್ಬ, ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಮೂಗಲಿ ಎಂಬಲ್ಲಿ ನಡೆದಿದೆ. ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗುವ ಆಸೆಯೇ ಕೊನೆಯಾಯಿತು
ಮೃತ ಯುವಕನನ್ನು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು ಎಲ್‌ಎನ್ ಎಂದು ಗುರುತಿಸಲಾಗಿದೆ. ಮನು ಅವರ ಮದುವೆಯು ಮುಂದಿನ ತಿಂಗಳು ಮೇ 10, 2026 ರಂದು ನಿಶ್ಚಯವಾಗಿತ್ತು. ಮದುವೆಗೆ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿತ್ತಿದ್ದವು. ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ತನ್ನ ಮದುವೆಯ ಸವಿನೆನಪಿಗಾಗಿ ‘ಪ್ರೀ ವೆಡ್ಡಿಂಗ್ ಶೂಟ್’ (Pre-wedding shoot) ಮಾಡಿಸಿಕೊಳ್ಳಬೇಕೆಂಬ ಹಂಬಲ ಮನುವಿಗಿತ್ತು. ಈ ಕಾರಣಕ್ಕಾಗಿ ಹುಡುಗಿಯನ್ನು ಕರೆತರಲು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವಿಧಿ ಮನುವಿನ ಜೀವನಕ್ಕೆ ಅಂತ್ಯಾವಾಡಿದೆ.
ಸಕಲೇಶಪುರ ತಾಲ್ಲೂಕಿನ ಮೂಗಲಿ ಎಂಬಲ್ಲಿ ಮನು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ವೇಗವಾಗಿ ಅಪ್ಪಳಿಸಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಮನು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುಂದರ ಕನಸುಗಳನ್ನು ಹೊತ್ತು ಮದುವೆಯ ತಯಾರಿಯಲ್ಲಿದ್ದ ಯುವಕ ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.
ಯಾವ ಮನೆಯಲ್ಲಿ ಮದುವೆ ಮಂತ್ರಗಳು ಮೊಳಗಬೇಕಿತ್ತೋ, ಅಲ್ಲಿಂದು ಮಗನನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.ಮಧು ಮಗಳನ್ನ ಕರೆತರಲು ಹೋದ ಮಗ ಬಾರದ ಲೋಕಕ್ಕೆ ತೆರಳಿದ್ದಾನೆ ಎಂಬ ಸುದ್ದಿ ಕೇಳಿ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆಯಲ್ಲಿ ಮೌನ ಆವರಿಸಿದೆ. ಇತ್ತ ತನ್ನ ಬಾಳ ಸಂಗಾತಿಯಾಗಬೇಕಿದ್ದವನನ್ನು ಕಳೆದುಕೊಂಡ ವಧುವಿನ ಸ್ಥಿತಿ ವರ್ಣನಾತೀತವಾಗಿದೆ.
“ವಿಧಿಯ ಆಟ ಬಲ್ಲವರಾರು? ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ಎಲ್ಲರನ್ನೂ ಕರೆಯುತ್ತಿದ್ದ ಕೈಗಳು, ಇಂದು ಆತನ ಚಿತೆಗೆ ಅಗ್ನಿ ಸ್ಪರ್ಶ ಮಾಡುವಂತಾಗಿರುವುದು ದೌರ್ಭಾಗ್ಯ.”ಮೃತ ಮನು ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸೋಣ.