ಕೆ.ಆರ್.ಪುರ: ಕ್ಷೇತ್ರದ ಬಿ.ನಾರಾಯಣಪುರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಅವರು ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಶಾಸಕ ಬಿ.ಎ.ಬಸವರಾಜ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ ಹೆಚ್ಚಿದ್ದು,
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಮೂಲಭೂತ ಸೌಕರ್ಯಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕ್ಷೇತ್ರದ ಜನತೆಯ ಪರವಾಗಿ ಅನುದಾನದ ಬಗ್ಗೆ ಹಲವು ಬಾರಿ ಮುಖ್ಯಮಂತ್ರಿ ಸೇರಿದಂತೆ ಸಚಿವರನ್ನು ಭೇಟಿ ಮಾಡಿದ್ದು,ಅಲ್ಪಸ್ವಲ್ಪ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಅನುದಾನ ಕೊರತೆಯ ಹಿನ್ನೆಲೆಯಲ್ಲಿ ಒಳಚರಂಡಿ ಸೇರಿದಂತೆ ಚರಂಡಿ ಕಾಮಗಾರಿಗಳ ನಂತರ ಅಭಿವೃದ್ಧಿ ಕಾಮಗಾರಿ ಮಾಡಬೇಕು,ಅಭಿವೃದ್ಧಿಯಾದ ರಸ್ತೆಯನ್ನು ಮತ್ತೆ ಅಗಿದು, ಅನುದಾನವನ್ನು ವ್ಯರ್ಥ ಮಾಡಬಾರದು ಎಂದು ತಿಳಿಸಿದರು.
ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ ನಂತರವಷ್ಟೇ ಡಾಂಬರೀಕರಣ ಅಥವಾ ಕಾಂಕ್ರೀಟ್ ರಸ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ನಂತರ ಬಿ.ನಾರಾಯಣಪುರ ಪಾರ್ಕ್ ನಲ್ಲಿ ಸಾರ್ವಜನಿಕ ಶೌಚಾಲಯ ಉದ್ಘಾಟನೆ ಮತ್ತು ಹೈಮಾಸ್ಟ್ ಲೈಟ್ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್ ಗೌಡ,ಮುಖಂಡರಾದ ನಾಗರಾಜ್,ಮಹೇಶ್,ಭಾಸ್ಕರ್ ಮತ್ತಿತರರು ಇದ್ದರು.