ಬೆಂಗಳೂರು: ನಗರದಲ್ಲಿ ನಂಬಿಕೆ ದುರುಪಯೋಗಪಡಿಸಿಕೊಂಡ ದಂಪತಿ ಕಳ್ಳತನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಬ್ಯುಸಿನೆಸ್ ಕಮ್ ಕಂಟ್ರಾಕ್ಟರ್ ಆಗಿರುವ ಮಲ್ಲಿಕಾರ್ಜುನ್ ನಾಯ್ಡು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಕಳ್ಳತನ ನಡೆಸಿರುವುದು ಪತ್ತೆಯಾಗಿದೆ.
ಐಶ್ವರ್ಯಾ ಮತ್ತು ಮಣಿಕಂಠ ಎಂಬ ದಂಪತಿ ಕಳೆದ ನಾಲ್ಕು ತಿಂಗಳ ಹಿಂದೆ ಮನೆ ಕೆಲಸಕ್ಕಾಗಿ ಸೇರಿಕೊಂಡಿದ್ದು, ಆಗಿನಿಂದಲೇ ಹಂತ ಹಂತವಾಗಿ ಚಿನ್ನ ಮತ್ತು ಹಣ ಕದಿಯುತ್ತಿದ್ದರೆಂದು ತಿಳಿದುಬಂದಿದೆ. ಒಂದೂವರೆ ವರ್ಷದ ಮಗುವಿದ್ದರೂ ಸಹ ಕಳ್ಳತನಕ್ಕೆ ಕೈ ಹಾಕಿದ್ದ ದಂಪತಿ, ಏಪ್ರಿಲ್ 25ರಂದು ಮತ್ತೊಮ್ಮೆ ಮನೆಯಲ್ಲಿ ಇದ್ದ ಚಿನ್ನವನ್ನು ಕದ್ದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಲೀಕರಿಗೆ ಅನುಮಾನ ಬಂದು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸರು ದಂಪತಿಯ ಬಳಿ ಸುಮಾರು 14 ಲಕ್ಷ ರೂಪಾಯಿ ನಗದು, 199 ಗ್ರಾಂ ಚಿನ್ನ ಹಾಗೂ 730 ಗ್ರಾಂ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.