ಬೆಂಗಳೂರು, ವೈಟ್‌ಫೀಲ್ಡ್: ಅಪರೂಪದ ಹಾಗೂ ಜೀವಕ್ಕೆ ಅಪಾಯಕಾರಿಯಾದ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ವರ್ಷದ ಬಾಲಕಿಯ ಜೀವವನ್ನು ಮೆಡಿಕವರ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಉಳಿಸಿದ್ದಾರೆ. ಈ ಪ್ರಕರಣದಲ್ಲಿ ಮಕ್ಕಳ ತಜ್ಞೆ ಡಾ ಲೀನತಾ ರೆಡ್ಡಿ ಪ್ರಮುಖ ಪಾತ್ರವಹಿಸಿ ಅಪರೂಪದ “ರಪುಂಜಲ್ ಸಿಂಡ್ರೋಮ್” (Rapunzel Syndrome) ಎಂಬ ಸ್ಥಿತಿಯನ್ನು ಗುರುತಿಸಿ ಚಿಕಿತ್ಸೆ ನೀಡಿದ್ದಾರೆ.

ಮಗು ಬಾಲ್ಯದಿಂದಲೇ ಕೂದಲು, ರಬ್ಬರ್ ಬ್ಯಾಂಡ್‌ಗಳು ಹಾಗೂ ಬಲೂನ್ ತುಂಡುಗಳಂತಹ ಆಹಾರವಲ್ಲದ ವಸ್ತುಗಳನ್ನು ತಿನ್ನುವ ವಿಚಿತ್ರ ಅಭ್ಯಾಸ ಹೊಂದಿತ್ತು. ಇದರಿಂದ ಹೊಟ್ಟೆಯೊಳಗೆ ದೊಡ್ಡ ಪ್ರಮಾಣದ ಕೂದಲಿನ ಗುಡ್ಡೆ (Trichobezoar) ರೂಪಗೊಂಡು, ಅದು ಹೊಟ್ಟೆಯಿಂದ ಸಣ್ಣ ಆಂತ್ರದವರೆಗೆ ವಿಸ್ತರಿಸಿತ್ತು. ಈ ಅಪರೂಪದ ಸ್ಥಿತಿಗೆ “ರಪುಂಜಲ್ ಸಿಂಡ್ರೋಮ್” ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಚಿಕ್ವಕ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಎರಡು ವರ್ಷದ ಮಗುವಿನಲ್ಲಿ ಕಂಡುಬಂದಿರುವುದು ಅತ್ಯಂತ ಅಪರೂಪವಾಗಿದೆ.
ಕೆಲವು ದಿನಗಳಿಂದ ಮಗುವಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಹಾಗೂ ಆಹಾರ ಸೇವನೆ ಕಡಿಮೆಯಾಗಿತ್ತು. ಇದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಹೊಟ್ಟೆಯಿಂದ ಸಣ್ಣ ಆಂತ್ರದವರೆಗೆ ಹರಡಿರುವ ದೊಡ್ಡ ಕೂದಲಿನ ಗುಡ್ಡೆ ಆಹಾರವನ್ನ ಪಚನಗೊಳ್ಳಲು ಮತ್ತು ಸರಾಗವಾಗಿ ಹೊಗಲು ಕಷ್ಟವಾಗುತ್ತಿತ್ತು.
ಮೊದಲಿಗೆ ಗ್ಯಾಸ್ಟ್ರೋಎಂಟರಾಲಜಿಸ್ಟ್ Dr. Roopesh Kalyan ಎಂಡೋಸ್ಕೋಪಿಯ ಮೂಲಕ ಅದನ್ನು ತೆಗೆಯಲು ಪ್ರಯತ್ನಿಸಿದರು. ಆದರೆ ಗುಡ್ಡೆಯ ಗಾತ್ರ ಮತ್ತು ವ್ಯಾಪ್ತಿ ಹೆಚ್ಚಾಗಿದ್ದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು.
ಮೆಡಿಕವರ್ ವೈದ್ಯರ ನಾಲ್ಕು ಜನರ ತಂಡ ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದರು. ಸುಮಾರು 25 ಸೆಂ.ಮೀ ಉದ್ದ ಮತ್ತು 480 ಗ್ರಾಂ ತೂಕದ ದೊಡ್ಡ ಕೂದಲಿನ ಗುಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದು ಮಗುವಿನ ಜೀವ ಉಳಿಸಲಾಯಿತು.

ಪ್ರಸ್ತುತ ಮಗು ವೈದ್ಯರ ನಿಗಾದಲ್ಲಿದ್ದು ಆರೋಗ್ಯವಾಗಿ ಚೇತರಿಸಿಕೊಳ್ಳುತ್ತಿದೆ.
ಡಾ. ಲೀನಾಥ ರೆಡ್ಡಿ ಮಾತನಾಡಿ,“ಚಿಕ್ಕ ಮಕ್ಕಳಲ್ಲಿ ಪಿಕಾ (Pica) ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಹಲವಾರು ಬಾರಿ ಕಡೆಗಣಿಸಲಾಗುತ್ತದೆ. ಪೋಷಕರು ಅದರ ಗಂಭೀರತೆಯನ್ನು ಅರಿಯುವಷ್ಟರಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಇದು ರಪುಂಜಲ್ ಸಿಂಡ್ರೋಮ್‌ನಂತಹ ಅಪಾಯಕಾರಿಯಾದ ಸ್ಥಿತಿಗೆ ತಲುಪಬಹುದು. ಮಕ್ಕಳಲ್ಲಿ ಆಹಾರವಲ್ಲದ ವಸ್ತುಗಳನ್ನು ತಿನ್ನುವ ಅಭ್ಯಾಸ ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ,” ಎಂದು ಹೇಳಿದರು.
ವೈದ್ಯರ ಪ್ರಕಾರ ಪಿಕಾ ಸಮಸ್ಯೆ ಸಾಮಾನ್ಯವಾಗಿ ಐರನ್ ಕೊರತೆಯ ಅನಿಮಿಯಾ ಸೇರಿದಂತೆ ಪೋಷಕಾಂಶಗಳ ಕೊರತೆಯೊಂದಿಗೆ ಸಂಬಂಧ ಹೊಂದಿರಬಹುದು. ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಈ ಘಟನೆ ಮಕ್ಕಳ ಆಹಾರ ಅಭ್ಯಾಸಗಳ ಬಗ್ಗೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ.
ಮಗುವಿನ ಕುಟುಂಬಕ್ಕೆ ಪೌಷ್ಟಿಕ ಆಹಾರ ಸಹಾಯ, ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ನಿಯಮಿತ ವೈದ್ಯಕೀಯ ಫಾಲೋ-ಅಪ್ ಸಲಹೆ ನೀಡಲಾಗಿದೆ.