ಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಯ ಬಳಿ ಮೂರು ನಿಂಬೆಹಣ್ಣು ಹಾಗೂ ನಾಟಿ ಕೋಳಿಯ ಕತ್ತು ಕೊಯ್ದು ಹಾಕಿರುವುದು ಭಾನುವಾರ ಮಧ್ಯಾಹ್ನ ಪತ್ತೆಯಾಗಿತ್ತು ವಾಮಾಚಾರ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಮನೆಯ ಬಳಿ ಕೂಡು ರಸ್ತೆಯಿದ್ದು (ಜಿಬಿಎ ಮೈದಾನದ ಎದುರು) ಆ ರಸ್ತೆಯ ಬದಿಯಲ್ಲಿ ವೃತ್ತಾಕಾರ ಹಾಕಿ ನಾಟಿ ಕೋಳಿಯೊಂದನ್ನು ಕೊಯ್ದು ಹಾಕಲಾಗಿತ್ತು. ಅದರ ಪಕ್ಕದಲ್ಲೇ ನಿಂಬೆಹಣ್ಣನ್ನು ಹಾಕಲಾಗಿತ್ತು. ಕೋಳಿ ತಲೆಯನ್ನು ನಾಯಿ ಎತ್ತಿಕೊಂಡು ಹೋಗಿದೆ. ಆ ಮಾರ್ಗದಲ್ಲಿ ತೆರಳಿದ ವಾಹನ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ಕುತೂಹಲದಿಂದ ವೀಕ್ಷಿಸಿ ಹೋಗುತ್ತಿದ್ದರು.
‘ವಾಮಾಚಾರ ನಡೆಸಲಾಗಿದೆ’ ಎಂದು ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಕೋಳಿಯನ್ನು ಸ್ಥಳದಿಂದ ತೆಗೆದು ಹಾಕಲಾಗಿದೆ. ಶನಿವಾರ ತಡರಾತ್ರಿ ಕಿಡಿಗೇಡಿಗಳು ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆ ಮಾರ್ಗದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದೇವೆ. ಕೃತ್ಯ ಎಸಗಿದವರ ಸುಳಿವು ಇನ್ನೂ ಪತ್ತೆಯಾಗಿಲ್ಲ’ ಎಂದು ಪೊಲೀಸರು ಹೇಳಿದರು.