ಬೆಂಗಳೂರು ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಕಾರ್ಯಾಚರಣೆಯ ವೇಳೆ ರೌಡಿಶೀಟರ್ ಒಬ್ಬನಿಗೆ ಕಾಲಿಗೆ ಗುಂಡು ಬಿದ್ದ ಘಟನೆ ನಡೆದಿದೆ.
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗೇನಾ ಅಗ್ರಹಾರದ ತೋಪು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜೀವ (19) ಎಂಬ ರೌಡಿಶೀಟರ್‌ಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಆರೋಪಿ ಜೀವ (19) ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಪ್ರಕಾರ, ಕೊ*ಲೆ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಕಳೆದ ವಾರ ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ನಡೆದ ದರೋಡೆ ಪ್ರಕರಣಗಳಲ್ಲೂ ಈತನ ವಿರುದ್ಧ ಆರೋಪಗಳು ದಾಖಲಾಗಿದ್ದವು.
ಖಚಿತ ಮಾಹಿತಿಯ ಪಡೆದು ಹೆಬ್ಬಗೋಡಿ ಪೊಲೀಸರು ಬಂಧಿಸಲು ಹೋದ ವೇಳೆ ಆರೋಪಿ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ
ಈ ಸಂದರ್ಭದಲ್ಲಿ ಸಿಬ್ಬಂದಿ ನಾಗೇಶ್ ಅವರ ಮೇಲೆ ದಾಳಿ ಯತ್ನ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಅವರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ.
ಇನ್ಸ್‌ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.