Saturday, July 11, 2026
Home ಬೆಂಗಳೂರು ನಗರವಿಕಸಿತ್ ಭಾರತ್ ರೋಜ್ಗಾರ್ ಯೋಜನೆಯಿಂದ ಯುವಕರಿಗೆ ಹೊಸ ಉದ್ಯೋಗ ಅವಕಾಶಗಳು: ಮಂಜುಳಾ ಲಿಂಬಾವಳಿ

ವಿಕಸಿತ್ ಭಾರತ್ ರೋಜ್ಗಾರ್ ಯೋಜನೆಯಿಂದ ಯುವಕರಿಗೆ ಹೊಸ ಉದ್ಯೋಗ ಅವಕಾಶಗಳು: ಮಂಜುಳಾ ಲಿಂಬಾವಳಿ

by Dharmaraju
0 comments

ಮಹದೇವಪುರ: ದೇಶದ ಆರ್ಥಿಕ ಪ್ರಗತಿ ಮತ್ತು ವಿಕಸಿತ ಭಾರತ ನಿರ್ಮಾಣದ ಗುರಿ ಸಾಧಿಸಲು ಯುವಕರಿಗೆ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಅತ್ಯಗತ್ಯವಾಗಿದ್ದು, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಕ್ಷೇತ್ರದ ಶಾಸಕಿ ಮಂಜುಳಾ ಎಸ್. ಅರವಿಂದ ಲಿಂಬಾವಳಿ ಹೇಳಿದರು.

ಮಹದೇವಪುರದಲ್ಲಿ ನಡೆದ ಪಿಎಂ-ವಿಬಿಆರ್‌ವೈ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.

ಭಾರತ ಇಂದು ಅಭಿವೃದ್ಧಿಯ ಪಥದಲ್ಲಿ ಐತಿಹಾಸಿಕ ಘಟ್ಟವನ್ನು ತಲುಪಿದ್ದು, ಯುವಜನತೆ ದೇಶದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಈ ಯುವಶಕ್ತಿಗೆ ಸೂಕ್ತ ಉದ್ಯೋಗಾವಕಾಶ, ಕೌಶಲ್ಯಾಭಿವೃದ್ಧಿ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಮೂಲಕ ದೇಶವನ್ನು ವಿಶ್ವದ ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸುವ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದರು.

ಪಿಎಂ-ವಿಬಿಆರ್‌ವೈ ಯೋಜನೆಯಡಿ ಮೊದಲ ಬಾರಿಗೆ ಔಪಚಾರಿಕ ಉದ್ಯೋಗಕ್ಕೆ ಸೇರ್ಪಡೆಯಾಗುವ ಯುವಕರಿಗೆ ₹15,000 ವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇ-ಪಿಎಫ್‌ಒ ನಲ್ಲಿ ನೋಂದಾಯಿತ ಉದ್ಯೋಗಿಗಳಿಗೆ ನೇರ ಪ್ರಯೋಜನ ದೊರೆಯಲಿದೆ. ಇದರ ಜೊತೆಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳು ಮತ್ತು ಉದ್ಯೋಗದಾತರಿಗೂ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.

ದೇಶಾದ್ಯಂತ ಕೋಟ್ಯಂತರ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಯೋಜನೆ ಹೊಂದಿದ್ದು, ಮೊದಲ ಬಾರಿಗೆ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ಯುವಜನರ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ. ಉದ್ಯೋಗವು ಕೇವಲ ಆದಾಯದ ಮೂಲವಲ್ಲ, ಅದು ವ್ಯಕ್ತಿಯ ಜೀವನಮಟ್ಟ ಸುಧಾರಣೆ, ಸಾಮಾಜಿಕ ಭದ್ರತೆ ಮತ್ತು ಕುಟುಂಬದ ಅಭಿವೃದ್ಧಿಗೆ ಕಾರಣವಾಗುತ್ತದೆ. ಯುವಕರು ಸ್ವಾವಲಂಬಿಗಳಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಇಂತಹ ಯೋಜನೆಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಮಹದೇವಪುರ ಕ್ಷೇತ್ರವು ರಾಜ್ಯದ ಪ್ರಮುಖ ಐಟಿ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದ್ದು, ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಿದೆ. ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಸ್ಟಾರ್ಟ್‌ಅಪ್ ಮತ್ತು ಸೇವಾ ವಲಯಗಳಲ್ಲಿ ನಿರಂತರ ಹೂಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಸ್ಥಳೀಯ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅಭಿಪ್ರಾಯಪಟ್ಟರು.

ಉದ್ಯೋಗ ಸೃಷ್ಟಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜದ ಎಲ್ಲ ವರ್ಗಗಳ ಸಹಕಾರದಿಂದ ಮಾತ್ರ ಉದ್ಯೋಗ ವೃದ್ಧಿ ಸಾಧ್ಯ. ಯುವಕರಿಗೆ ಅವಕಾಶ ನೀಡುವ ಮೂಲಕ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕೈಗಾರಿಕೆಗಳು ಮಹತ್ವದ ಕೊಡುಗೆ ನೀಡುತ್ತಿವೆ. ಈ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಪಾಲ್ಗೊಂಡಿರುವ ಉದ್ಯೋಗದಾತರು ಹಾಗೂ ಕೈಗಾರಿಕಾ ವಲಯದ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು.

ಯುವಕರು ಸರ್ಕಾರದ ವಿವಿಧ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು. ವಿಕಸಿತ ಭಾರತ-2047 ಕನಸನ್ನು ಸಾಕಾರಗೊಳಿಸಲು ಕೌಶಲ್ಯಯುತ, ಉತ್ಪಾದಕ ಮತ್ತು ಆತ್ಮವಿಶ್ವಾಸಿ ಯುವಪಡೆಯ ಅಗತ್ಯವಿದ್ದು, ಪಿಎಂ-ವಿಬಿಆರ್‌ವೈ ಯೋಜನೆಯ ಗುರಿ ಸಾಧನೆಗೆ ನೆರವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಪಿಎಫ್‌ಒ ವಲಯ ಆಯುಕ್ತೆ ಇಂದಿರಾ ತಿರುಮಲರಾಜು, ವಾಸಿಯಾ ಅಧ್ಯಕ್ಷ ಚಂದ್ರಶೇಖರ್, ವಾಸಿಯಾ ಪ್ರತಿನಿಧಿ ಶ್ರೀನಿವಾಸ ರಾಜು, ಪ್ರಾದೇಶಿಕ ಸಮಿತಿ ಸದಸ್ಯ ನಾಗನಾಥ್, ಇಎಸ್‌ಐ ಆಸ್ಪತ್ರೆಯ ಉಪ ನಿರ್ದೇಶಕ ರಾಮರಾಜ್ ಮೀನಾ, ಕೈಗಾರಿಕಾ ವಲಯದ ಪ್ರತಿನಿಧಿಗಳು, ಉದ್ಯೋಗದಾತರು, ಫಲಾನುಭವಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

You may also like

Leave a Comment