ದೊಡ್ಡಬಳ್ಳಾಪುರ; (ಪ್ರಭಾ, ಮಾ.24 ); ದಸ್ತಗಿರಿಗೆ ಮುಂದಾದ ಪೊಲೀಸರ ಮೇಲೆ ಚಾಕುವಿನಿಂದ ಚುಚ್ಚಿ, ಹಲ್ಲೆಮಾಡಿ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳಿಗೆ ದೊಡ್ಡಬಳ್ಳಾಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕೊಲೆಗೆ ಯತ್ನಿಸಿದ ಆರೋಪಿಗಳು ಹೇಮಂತ್, ಸೋನು ಎಂದು ತಿಳಿದುಬಂದಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ದ ಡಕಾಯಿತಿ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿತ್ತು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರ ತಂಡ ರಚನೆ ಮಾಡಲಾಗಿತ್ತು. ಅದರಂತೆ ದಿನಾಂಕ: 10.09.2020 ರಂದು ಸಂಜೆ 5.55 ಗಂಟೆಯಲ್ಲಿ ಆರೋಪಿಗಳಾದ ಹೇಮಂತ್ ಕುಮಾರ್ ಹಾಗೂ ಸೋನು ರವರುಗಳು ಕೆಎ-03-ಎಂಸಿ-6915 ಚವರ್ಲೆಟ್ ಕಾರಿನಲ್ಲಿ ದೊಡ್ಡಬಳ್ಳಾಪುರ – ಡಾಬಸ್ ಪೇಟೆ ಮೂಲಕ ತುಮಕೂರು ಕಡೆಗೆ ಹೋಗುತ್ತಿರುತ್ತಾರೆಂದು ಈ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸರ್ಕಾರಿ ವಾಹನಗಳಲ್ಲಿ ಕೊಡಿಗೇಹಳ್ಳಿ ಕಡೆಯಿಂದ ಆರೋಪಿಗಳನ್ನು ಹಿಂಬಾಲಿಸಿಕೊಂಡು ಬಂದು ಕೆಸ್ತೂರು ಗ್ರಾಮದ ಬಳಿ ಬಂಡಿಜಾಡು ರಸ್ತೆಯಲ್ಲಿ ಆರೋಪಿಗಳ ಕಾರನ್ನು ಅಡ್ಡ ಹಾಕಿ ದಸ್ತಗಿರಿ ಮಾಡಲು ಹೋದಾಗ ಇಬ್ಬರೂ ಆರೋಪಿಗಳು ಕೈಗಳಲ್ಲಿ ಚಾಕುಗಳನ್ನು ಹಿಡಿದುಕೊಂಡು ಬಂದು ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಿಡಿದುಕೊಳ್ಳಲು ಹೋದ ಪೊಲೀಸರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆಮಾಡಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದದ್ದರು. ಈ ಸಂಬಂಧ ಆರೋಪಿಗಳ ವಿರುದ್ಧ ಅಂದಿನ ತನಿಖಾಧಿಕಾರಿಗಳಾಗಿದ್ದ ಪೊಲೀಸ್ ಇನ್ಸೆಕ್ಟರ್ ಕುಮಾರ್ ಎ.ವಿ ರವರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣವು ನಗರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠವು ಎಸ್.ಸಿ.ನಂ:10003/2021 ರಂತೆ ವಿಚಾರಣೆ ನಡೆಸಿತ್ತು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ. ಟಿ.ಎನ್ ನಟರಾಜ ರವರು ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಆರೋಪಿತರು ಅಪರಾಧ ಎಸಗಿರುವುದು ಸಾಭೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ. ನಿರ್ಮಲ. ಕೆ ರವರು ಮಾರ್ಚ್ 23 ರಂದು ರಂದು ಪ್ರಕರಣದ ಇಬ್ಬರೂ ಆರೋಪಿತರಿಗೆ ಐ.ಪಿ.ಸಿ ಕಲಂ;307 ರ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ತಲಾ 10,000/- ರೂ ದಂಡ, ಐ.ಪಿ.ಸಿ ಕಲಂ;332 ರ ಅಪರಾಧಕ್ಕಾಗಿ 3 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ತಲಾ 5,000/- ರೂ ದಂಡ ಮತ್ತು ಐ.ಪಿ.ಸಿ ಕಲಂ; 353 ಅಪರಾಧಕ್ಕಾಗಿ 2 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.