ಚಿತ್ರದುರ್ಗ: ಅನೈತಿಕ ಸಂಬಂಧ ಆರೋಪ ಕಟ್ಟಿ ಸಹಪಾಟಿಗಳಿಂದ ಅವಮಾನ ಮಾಡಿದ ಹಿನ್ನಲೆ ಬಿಎಎಂಎಸ್ ಮುಗಿಸಿ ಇಂಟರ್ನ್ ಶಿಫ್ ಮಾಡುತ್ತಿದ್ದ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ನೇ*ಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದ ಬಸವ ಲೇಔಟ್‌ನಲ್ಲಿ ವಾಸವಿದ್ದ 23 ವರ್ಷದ ನಿಖಿತಾ ಆತ್ಮ*ತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಬಿಎಎಂಎಸ್ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ.
ನಿಖಿತಾ ಸಾವಿಗೂ ಮುನ್ನ ಬರೆದಿದ್ದ ಎಂಟು ಪುಟಗಳ ಡೆತ್‌ನೋಟ್ ಪತ್ತೆಯಾಗಿದ್ದು, ಕಾಲೇಜಿನ ಅಧ್ಯಾಪಕ ಡಾ.ರಾಜು ಎಂಬುವವರ ಜೊತೆ ತನಗೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಈ ಅಪಪ್ರಚಾರದಿಂದ ತನ್ನ ಘನತೆಗೆ ಧಕ್ಕೆ ಬಂದಿದೆ ಮತ್ತು ಮಾನಸಿಕವಾಗಿ ಜರ್ಜರಿತಗೊಂಡಿದ್ದೇನೆ ಎಂದು ಅವಳು ಬರೆದುಕೊಂಡಿದ್ದಾರೆ. ಅದರಿಂದ ಡಾ.ರಾಜು ಪತ್ನಿ ನಿಶಾ ನಿಖಿತಾ ಜೊತೆ ಜಗಳ ಮಾಡಿದ್ದರಂತೆ. ಡೆತ್‌ನೋಟ್‌ನಲ್ಲಿ ಪ್ರಮುಖವಾಗಿ ಅಧ್ಯಾಪಕ ಡಾ.ರಾಜು, ಅವರ ಪತ್ನಿ ನಿಶಾ ಹಾಗೂ ಕಾಲೇಜಿನ ಕೆಲವು ಸಹಪಾಠಿ ವಿದ್ಯಾರ್ಥಿನಿಯರ ಹೆಸರುಗಳನ್ನು ಬರೆಯಲಾಗಿದೆ. ಇವರೆಲ್ಲರೂ ಸೇರಿ ತನ್ನ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಎಂದು ನಿಖಿತಾ ಆರೋಪಿಸಿದ್ದಾಳೆ.
ಈ ಸಂಬಂಧ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.