ಕಲಬುರಗಿ: ಹಳೆಯ ಜೇವರ್ಗಿ ರಸ್ತೆಯಲ್ಲಿ ಗುರುವಾರ ಸಂಜೆ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಅನಿಲ್ ರಾಠೋಡ್(45) ಹತ್ಯೆಯಾದ ವ್ಯಕ್ತಿ.ಅನಿಲ ವರಸೆಯಲ್ಲಿ ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಅಳಿಯನಾಗಬೇಕು ಎಂದು ತಿಳಿಬಂದಿದೆ.
ಅನಿಲ್ ರಾಠೋಡ್ ಅವರು ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಕಚೇರಿಯಲ್ಲಿದ್ದಾಗ, ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ನೇರವಾಗಿ ಕಚೇರಿ ಒಳಗೆ ನುಗ್ಗಿದೆ.
ಮೃತ ಅನಿಲ್ ರಾಠೋಡ್ ಅವರು ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರದಲ್ಲಿ ಸಕ್ರಿಯರಾಗಿದ್ದರು. ಅವರ ಹತ್ಯೆಗೆ ಹಣಕಾಸಿನ ವಿಚಾರವೇ ಪ್ರಮುಖ ಕಾರಣವಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ವೈಯಕ್ತಿಕ ಅಥವಾ ವ್ಯವಹಾರಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳಿವುಗಳನ್ನು ಪತ್ತೆ ಹಚ್ಚಲು ಶ್ವಾನ ದಳ (Dog Squad) ಮತ್ತು ಫಿಂಗರ್ ಪ್ರಿಂಟ್ ತಜ್ಞರ ತಂಡ ಸ್ಥಳದಲ್ಲಿ ತೀವ್ರ ತಪಾಸಣೆ ನಡೆಸಿದೆ.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ಆಟೋದಲ್ಲಿ ಬಂದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿರುವುದರಿಂದ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರವೇ ಹಂತಕರನ್ನು ಸೆರೆ ಹಿಡಿಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.