ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಮನಸ್ಸು ಕಲುಕುವ ದಾರುಣ ಘಟನೆ ಸಂಭವಿಸಿದ್ದು, ಪತಿ, ಪತ್ನಿ ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ.
ಮಧುರಾ ಕರೆಪ್ಪ ಮಾದರ (30) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೊಂದೆಡೆ, ಪತ್ನಿಯ ಸಾವಿನ ಸುದ್ದಿ ತಿಳಿದು ಆತಂಕಗೊಂಡ ಪತಿ ಕರೆಪ್ಪ ಗಂಗಪ್ಪ ಮಾದರ (36) ಅವರು ತಕ್ಷಣ ಆಸ್ಪತ್ರೆಗೆ ತೆರಳಲು ಹೊರಟಿದ್ದರು. ಆದರೆ ವಿಧಿಯಾಟವೆನ್ನುವಂತೆ, ಮಾರ್ಗಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಪತಿ, ಪತ್ನಿ ಇಬ್ಬರೂ ಸಾವಿಗೀಡಾದ ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಈ ದಂಪತಿಗಳು ಕಳೆದ 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಪೋಷಕರನ್ನು ಒಂದೇ ದಿನ ಕಳೆದುಕೊಂಡಿರುವ ಈ ಮೂವರು ಮಕ್ಕಳ ಸ್ಥಿತಿ ಕರುಣಾಜನಕವಾಗಿದ್ದು, ಕುಟುಂಬದವರಲ್ಲದೇ ಗ್ರಾಮಸ್ಥರ ಮನಸ್ಸನ್ನೂ ಮಿಡಿಯುವಂತಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ದುರಂತ ಘಟನೆ ಅರವಳ್ಳಿ ಗ್ರಾಮದಲ್ಲಿ ಗಂಭೀರ ಶೋಕದ ವಾತಾವರಣ ನಿರ್ಮಾಣ ಮಾಡಿದ್ದು, ಮೃತರ ಕುಟುಂಬಕ್ಕೆ ಗ್ರಾಮಸ್ಥರು ಸಂತಾಪ ಸೂಚಿಸುತ್ತಿದ್ದಾರೆ.