ಮಧುರೈ (ತಮಿಳುನಾಡು): ದೇಶವನ್ನೇ ಬೆಚ್ಚಿಬೀಳಿಸಿದ್ದ ತೂತ್ತುಕುಡಿಯ ಶಾಂತನ್‌ಕುಲಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಂದೆ, ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಸೋಮವಾರ 9 ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಆರು ವರ್ಷಗಳ ಹಿಂದೆ ನಡೆದಿದ್ದ ಘಟನೆಯಲ್ಲಿ ವ್ಯಾಪಾರಿ ಪಿ. ಜಯರಾಜ್ ಮತ್ತು ಅವರ ಪುತ್ರ ಜೆ.ಬೆನಿಕ್ಸ್ ಪೊಲೀಸ್ ಚಿತ್ರಹಿಂಸೆಗೆ ಬಲಿಯಾಗಿದ್ದರು.
ಸಿಬಿಐ ಈ ಪ್ರಕರಣದ ತನಿಖೆ ನಡೆಸಿತ್ತು, ಇದೀಗ ಮಧುರೈ ಜಿಲ್ಲಾ ನ್ಯಾಯಾಲಯ ಮಹತ್ವದ ಈ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ;
ಮೊಬೈಲ್ ಫೋನ್ ಮಾರಾಟದ ಅಂಗಡಿ ನಡೆಸುತ್ತಿದ್ದ ಜಯರಾಜ್, ಮಗ ಬೆನಿಕ್ಸ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ, ನಿಗದಿತ ಅವಧಿ ಮೀರಿ ವ್ಯಾಪಾರ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಜೂನ್ 19, 2020ರಂದು ಪೊಲೀಸರು ಅವರನ್ನು ಬಂಧಿಸಿದ್ದರು.
ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅವರಿಗೆ ಗಂಭೀರವಾದ ಗಾಯಗಳಾಗಿದ್ದವು. ಹೀಗಾಗಿ ಕೋವಿಲ್‌ಪಟ್ಟಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಜೂನ್ 23ರಂದು ಮೃತಪಟ್ಟರು. ಪೊಲೀಸರು ನೀಡಿದ ಚಿತ್ರಹಿಂಸೆಯಿಂದಾಗಿ ತಂದೆ, ಮಗ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು.
ಈ ಘಟನೆಗೆ ತಮಿಳುನಾಡು ಮಾತ್ರವಲ್ಲದೇ ದೇಶದಾದ್ಯಂತ ವ್ಯಾಪಕ ಆಕೋಶ ವ್ಯಕ್ತವಾಗಿತ್ತು.