Tuesday, May 19, 2026
Home ಬೆಂಗಳೂರು ನಗರಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳ ಆಗಮನ.

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳ ಆಗಮನ.

by Dharmaraju
0 comments

ಬನ್ನೇರುಘಟ್ಟ: ದಕ್ಷಿಣ ಆಫ್ರಿಕಾದಿಂದ‌ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನಾಲ್ಕು ಅಪರೂಪದ ಚೀತಾಗಳನ್ನ ತರೆಸುವಲ್ಲಿ ಅಧಿಕಾರಿ ವರ್ಗ ಯಶಸ್ವಿಯಾಗಿದೆ. ಆಫ್ರಿಕಾದಲ್ಲಿನ ಇಂಡುನಾ ಪ್ರೈಮೇಟ್ ಮತ್ತು ಪ್ಯಾರೆಟ್ ಪಾರ್ಕಿನಿಂದ ಎರಡು ಗಂಡು – ಎರಡು ಹೆಣ್ಣು ಚೀತಾಗಳನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಖಾಂತರ ಕರೆಸಲಾಗಿದೆ.

ಪ್ರಾಣಿಗಳ ಅನುವಂಶಿಕ ವೈವಿಧ್ಯತೆ ಹೆಚ್ಚಳಕ್ಕೆ, ಪ್ರವಾಸಿಗರಲ್ಲಿ ಪ್ರಾಣಿಗಳ ಜಾಗೃತಿ ಮೂಡಿಸಿ ಮತ್ತು ಸಂಶೋಧನೆಯನ್ನು ಕೈಗೊಳ್ಳುವ ಉದ್ದೇಶದಿಂದ ಈ ಚೀತಾಗಳನ್ನು ತರಿಸಲಾಗಿದೆ ಎಂದು ನಂಬಲಾಗಿದೆ.
4 ಶಿವಂಗಿ (ಚೀತಾ)ಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಶುಕ್ರವಾರ ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ಆಗಮಿಸಿರುವ ಈ ವಿದೇಶೀ ಅತಿಥಿಗಳನ್ನು ಬರಮಾಡಿಕೊಂಡರು.

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಚೀತಾಗಳಿಗೆ ವಾತಾವರಣ, ಹವಾಮಾನ ಬದಲಾವಣೆಯಾಗುವ ವನ್ಯಜೀವಿಗಳಿಗೆ ಸೋಂಕು ಇದೆಯೇ ಎಂದು ಪರಿಶೀಲಿಸಲು ಕ್ವಾರಂಟೈನಲ್ಲಿಡಬೇಕಿದ್ದು, 30ದಿನಗಳ ಕಾಲ ನಿಗಧಿತ ಆಹಾರ ನೀಡಬೇಕೆಂದು ಅರಣ್ಯ ಸಚಿವರು ಪಶುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿಯೇ ಸಿವಂಗಿ ಎಂದು ಕರೆಸಿಕೊಳ್ಳುವ ಚೀತಾಗಳಿದ್ದವು. ಆದರೆ ರಾಜ್ಯದ ಕಾಡಿನಲ್ಲಿ ಇವು ನಾಮಾವಶೇಷ ಆಗಿವೆ. ಹೀಗಾಗಿ ಮೃಗಾಲಯಗಳಲ್ಲಾದರೂ ಇವುಗಳನ್ನು ನೋಡಲು ಅವಕಾಶ ಆಗಬೇಕು. ಈ ನಿಟ್ಟಿನಲ್ಲಿ ಅವುಗಳ ಸುರಕ್ಷತೆಗೆ ಆದ್ಯ ಗಮನ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಸುನೀಲ್ ಪನ್ವಾರ್ ರಿಗೆ ಸೂಚನೆ ನೀಡಿದರು..

ಪ್ರಾಣಿ ವಿನಿಮಯದ ಮೊದಲು ಪಶು ಸಂಗೋಪನೆ ಇಲಾಖೆಯ ಮಾರ್ಗಸೂಚಿಗಳಂತೆ ದಕ್ಷಿಣ ಆಫ್ರಿಕಾದಲ್ಲಿ ಚೀತಾಗಳನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿರುತ್ತದೆ. ಜೊತೆಗೆ ಪ್ರಾಣಿಗಳನ್ನು ಆಮದು ಮಾಡುವ ಮೊದಲು ಪ್ರಾಣಿ ಕ್ವಾರಂಟೈನ್ ಸೇವೆಗಳಿಂದ (AQCS, Bangalore) ಮುಂಗಡ NoC ಪಡೆಯಲಾಗಿದೆ. ಆಗಮನದ ನಂತರ ಪ್ರಾಣಿಗಳನ್ನು ನಿಗದಿತ ಕ್ವಾರಂಟೈನ್ ಸೌಲಭ್ಯದಲ್ಲಿ ಇಡಲಾಗಿದೆ ಹಾಗೂ ಆರೋಗ್ಯ ತಪಾಸಣೆಗಳ ನಂತರ ಸಾರ್ವಜನಿಕರ ವೀಕ್ಷಣೆಗೆ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ.

ದಕ್ಷಿಣ ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರೆಟ್ ಪಾರ್ಕಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಕೃತಜ್ಞತೆಯನ್ನು ಸಲ್ಲಿಸಿದೆ..

You may also like

Leave a Comment