ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಯ ಸಂದರ್ಭದಲ್ಲಿ ಪ್ರವಾಹ ಪೀಡಿತವಾಗುವ ಸಾಧ್ಯತೆಯಿರುವ ಪ್ರದೇಶಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಮಳೆ ನೀರು ಕಾಲುವೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿ ಪರಿಶೀಲನೆ
ಗೆದ್ದಲಹಳ್ಳಿ ರೈಲ್ವೆ ವೆಂಟ್ ಬಳಿ ನಡೆಯುತ್ತಿರುವ ಪ್ರಮುಖ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು, ರೈಲ್ವೆ ಇಲಾಖೆಯ ಸಮನ್ವಯದೊಂದಿಗೆ ಈಗಾಗಲೇ ಎರಡು ಗರ್ಡರ್‌ಗಳನ್ನು ಅಳವಡಿಸಲಾಗಿರುತ್ತದೆ. ಕಾಸ್ಟಿಂಗ್ ಆಗಿ ಸಿದ್ಧಗೊಂಡಿರುವ ಒಂದು ಕಾಂಕ್ರೀಟ್ ಬಾಕ್ಸನ್ನು ಸುಮಾರು 10 ಮೀಟರ್ ವರೆಗೆ ಪುಶಿಂಗ್ ಕೆಲಸವನ್ನು ಸಹ ನಿರ್ವಹಿಸಲಾಗಿರುತ್ತದೆ. ಎರಡು ಕಾಂಕ್ರೀಟ್ ಬಾಕ್ಸ್ ಗಳ ಪುಶಿಂಗ್ ಕಾರ್ಯವನ್ನು ಮೇ 30ರೊಳಗಾಗಿ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಶ್ವಬ್ಯಾಂಕ್ ಅನುದಾನದ ಅಡಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ಕೈಗೊಂಡಿರುವ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಆಯುಕ್ತರು, ಗುಂಜೂರು ರಾಜಕಾಲುವೆ
ವರ್ತೂರು ಕೆರೆ ಕೋಡಿ ರಾಜಕಾಲುವೆ, ಮಣಿಪಾಲ್ ಆಸ್ಪತ್ರೆ ಸಮೀಪದ ರಾಜಕಾಲುವೆ, ಯಮಲೂರು (ಎಪ್ಸಿಲಾನ್ ಪ್ರದೇಶ), ಚಳ್ಳಘಟ್ಟ, ಎಸ್‌ಜಿಆರ್ ಡೆಂಟಲ್ ಕಾಲೇಜು ಸಮೀಪ ಹಾಗೂ ಮುನ್ನೇಕೊಳಲು ಪ್ರದೇಶಗಳಲ್ಲಿನ ಮಳೆ ನೀರು ಕಾಲುವೆಗಳನ್ನು ಪರಿಶೀಲಿಸಿದ ಆಯುಕ್ತರು.
* ಅಭಿವೃದ್ಧಿಗೆ ಮುನ್ನಾ ಮಳೆ ನೀರು ಹರಿವು ಸುಗಮಗೊಳಿಸಲು ಕಚ್ಚಾ ಕಾಲುವೆಯನ್ನು ವ್ಯವಸ್ಥಿತಗೊಳಿಸುವುದು.
* ಕಾಲುವೆಗಳಲ್ಲಿನ ಹೂಳು, ಮಣ್ಣು, ತ್ಯಾಜ್ಯ ಇತ್ಯಾದಿಗಳನ್ನು ತೆರವುಗೊಳಿಸಿ ಮಳೆ ನೀರಿನ ಸರಾಗ ಹರಿವಿಗೆ ಕ್ರಮವಹಿಸುವುದು.
* ಕಾರ್ಯದೇಶ ನೀಡಿರುವ ಕಡೆಗಳಲ್ಲಿ ಈ ಕೂಡಲೇ ಅಭಿವೃದ್ಧಿ ಕಾಮಗಾರಿ ಆರಂಭಿಸುವುದು ಹಾಗೂ ಕಾಮಗಾರಿಗೆ ವೇಗ ನೀಡಲು ಸೂಚಿಸಿದರು.
* ಕಾಲುವೆ ಒತ್ತುವರಿ ಆಗಿರುವ ಸ್ಥಳಗಳಲ್ಲಿ ಒತ್ತುವರಿ ತೆರವುಗೊಳಿಸಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಯಿತು.
* ಕಾಮಗಾರಿಗಳನ್ನು ವೇಗವಾಗಿ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳಿಸುವುದು.
* ಮಳೆಗಾಲದ ಮೊದಲು ಕಾಲುವೆಗಳ ಪ್ರಮುಖ ಸಂಪರ್ಕ ಭಾಗಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು.
* ಪ್ರವಾಹ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಇನ್ನಿತರೆ ನಿರ್ದೇಶನಗಳನ್ನು ನೀಡಿದರು.
ಮುಂಗಾರು ಮಳೆಗೂ ಮುನ್ನ ಪ್ರವಾಹ ನಿಯಂತ್ರಣ ಹಾಗೂ ಮಳೆ ನೀರು ನಿರ್ವಹಣೆಗೆ ಅಗತ್ಯ ಮೂಲಸೌಕರ್ಯಗಳನ್ನು ಬಲಪಡಿಸುವುದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪ್ರಮುಖ ಆದ್ಯತೆಯಾಗಿದ್ದು, ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಪ್ರವಾಹ ಸಮಸ್ಯೆ ತಡೆಯಲು ಹಾಗೂ ಸುರಕ್ಷಿತ ಪರಿಸರ ಒದಗಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಬದ್ಧವಾಗಿದೆ ಎಂದು ಆಯುಕ್ತರು ತಿಳಿಸಿದರು.

ಈ ಪರಿಶೀಲನೆ ಸಂದರ್ಭದಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು (ಯೋಜನಾ ಅನುಷ್ಠಾನ ಘಟಕ) ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.