Tuesday, May 19, 2026
Home ಬೆಂಗಳೂರು ನಗರತಾಯಿ ಜೊತೆ ಮಾತನಾಡುತ್ತಿದ್ದಾಗಲೇ ಬ್ರೈನ್ ಸ್ಟ್ರೋಕ್, 25ರ ಯುವ ಟೆಕ್ಕಿ ಸಾವು!

ತಾಯಿ ಜೊತೆ ಮಾತನಾಡುತ್ತಿದ್ದಾಗಲೇ ಬ್ರೈನ್ ಸ್ಟ್ರೋಕ್, 25ರ ಯುವ ಟೆಕ್ಕಿ ಸಾವು!

by Dharmaraju
0 comments

ಬೆಂಗಳೂರು: ಕೆಲಸ ಮುಗಿಸಿ ಮನೆಗೆ ಬಂದು ತಾಯಿಯ ಜೊತೆ ನಗುನಗುತ್ತಾ ಹರಟೆ ಹೊಡೆಯುತ್ತಿದ್ದ ಯುವತಿಯೊಬ್ಬಳು ಕ್ಷಣಾರ್ಧದಲ್ಲಿ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಮೃತಪಟ್ಟಿರುವ ದಾರುಣ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಶ್ವೇತಾ (25) ಎಂದು ಗುರುತಿಸಲಾಗಿದೆ. ಮೂಲತಃ ಹಾಸನ ಜಿಲ್ಲೆಯವರಾದ ಈಕೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕಳೆದ ಶನಿವಾರ ಕೆಲಸ ಮುಗಿಸಿ ಮನೆಗೆ ಬಂದಿದ್ದ ಶ್ವೇತಾ, ತಾಯಿಯ ಜೊತೆ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮಾತು ಕಳೆದುಕೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೋಮಾಗೆ ಜಾರಿದ್ದರು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಅಂಗಾಂಗ ದಾನಕ್ಕೂ ಒಲವು ತೋರಿದ್ದ ಪೋಷಕರು:
ಮಗಳ ಸಾವು ನಿಶ್ಚಿತ ಎಂದು ತಿಳಿದಾಗ ಪೋಷಕರು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿ ಇತರರಿಗೆ ಜೀವ ನೀಡಲು ಮುಂದಾಗಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಯುವಜನತೆಯಲ್ಲಿ ಹೆಚ್ಚಿದ ಆತಂಕ:

ಯಾವುದೇ ಪೂರ್ವ ಅನಾರೋಗ್ಯದ ಲಕ್ಷಣಗಳಿಲ್ಲದೆ, ಅತ್ಯಂತ ಆರೋಗ್ಯವಂತ ಯುವತಿಯಲ್ಲಿ ಈ ರೀತಿ ಹಠಾತ್ತನೆ ಬ್ರೈನ್ ಸ್ಟ್ರೋಕ್ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಬದಲಾದ ಜೀವನಶೈಲಿ, ಕೆಲಸದ ಒತ್ತಡ ಅಥವಾ ಇನ್ಯಾವುದೋ ಆರೋಗ್ಯ ಸಮಸ್ಯೆ ಇದರ ಹಿಂದೆ ಇರಬಹುದೇ ಎಂಬ ಚರ್ಚೆಗಳು ಶುರುವಾಗಿವೆ.

ಬ್ರೈನ್ ಸ್ಟ್ರೋಕ್‌ನ ಈ ಮುನ್ಸೂಚನೆಗಳ ಬಗ್ಗೆ ಎಚ್ಚರಿಕೆ ಇರಲಿ:
ವೈದ್ಯರ ಪ್ರಕಾರ, ಈ ಕೆಳಗಿನ ಲಕ್ಷಣಗಳು ಕಂಡ ತಕ್ಷಣ ವಿಳಂಬ ಮಾಡದೆ ಆಸ್ಪತ್ರೆಗೆ ದಾಖಲಾಗಬೇಕು:

ಮಾತಿನಲ್ಲಿ ತೊದಲುವಿಕೆ: ಇದ್ದಕ್ಕಿದ್ದಂತೆ ಮಾತು ಹೊರಬರದಿರುವುದು ಅಥವಾ ಅಸ್ಪಷ್ಟವಾಗುವುದು.

ಮುಖದ ಆಕಾರ ಬದಲಾವಣೆ: ನಗುವಾಗ ಮುಖದ ಒಂದು ಭಾಗ ಬದಿಗೆ ವಾಲುವುದು.

ಕೈ-ಕಾಲುಗಳ ಮರಗಟ್ಟುವಿಕೆ: ದೇಹದ ಒಂದು ಭಾಗದ ಕೈ ಅಥವಾ ಕಾಲುಗಳಲ್ಲಿ ಶಕ್ತಿ ಕುಂದುವುದು ಅಥವಾ ಮರಗಟ್ಟುವಿಕೆ.

ಯಾವುದೇ ಕಾರಣವಿಲ್ಲದೆ ಅತೀವವಾಗಿ ತಲೆನೋವು ಕಾಣಿಸಿಕೊಳ್ಳುವುದು.

You may also like

Leave a Comment