Tuesday, June 9, 2026
Home ಜಿಲ್ಲಾ‌ಸುದ್ದಿಬಸ್ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ: 20 ಪ್ರಯಾಣಿಕರ ಜೀವ ಉಳಿಸಿ ಪ್ರಾಣ ಬಿಟ್ಟ ಚಾಲಕ.

ಬಸ್ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ: 20 ಪ್ರಯಾಣಿಕರ ಜೀವ ಉಳಿಸಿ ಪ್ರಾಣ ಬಿಟ್ಟ ಚಾಲಕ.

by Dharmaraju
0 comments

ಮಡಿಕೇರಿ: ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರನ್ನು ಬೆಂಗಳೂರು ಮೂಲದ ಶಿವಕುಮಾರ್ (50) ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಇಂದು ಮುಂಜಾನೆ 4:45ರ ಸುಮಾರಿಗೆ ತಾಳತ್ತಮನೆ ತಲುಪಿದಾಗ ಈ ಘಟನೆ ಸಂಭವಿಸಿದೆ. ಚಾಲನೆ ಮಾಡುತ್ತಿದ್ದಾಗಲೇ ಶಿವಕುಮಾರ್ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯ ಬಲಬದಿಯ ದರೆಗೆ (ಗುಡ್ಡದ ಅಂಚು) ಢಿಕ್ಕಿ ಹೊಡೆದು ವಾಲಿ ನಿಂತಿದೆ.ಬಸ್ ವೇಗವಾಗಿ ಚಲಿಸುತ್ತಿದ್ದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸದೆ, ದರೆಗೆ ತಾಗಿ ನಿಂತಿದ್ದರಿಂದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಶಿವಕುಮಾರ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

You may also like

Leave a Comment