ಮಹದೇವಪುರ: ಇಲ್ಲಿನ ವೈಟ್‌ಫೀಲ್ಡ್ ಸಮೀಪದ ಬೆಳತೂರು ಗ್ರಾಮದಲ್ಲಿರುವ ಟ್ರಿಫೆಕ್ಟಾ ಎಸ್ಪ್ಲನೇಡ್ ಅಪಾರ್ಟ್‌ಮೆಂಟ್‌ನಲ್ಲಿ ೭೧ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಅಪಾರ್ಟ್‌ಮೆಂಟ್ ಸಮೀಪದ ಶಿವನ ದೇವಸ್ಥಾನದಿಂದ ಆರಂಭವಾದ ಭವ್ಯ ಮೆರವಣಿಗೆಯೊಂದಿಗೆ ಚಾಲನೆ ಪಡೆಯಿತು. ಕನ್ನಡದ ಹಳದಿ-ಕೆಂಪು ಬಾವುಟಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ನಾಡಿನ ಸಾಂಪ್ರದಾಯಿಕ ಕಲೆಗಳಾದ ಡೊಳ್ಳು ಕುಣಿತ, ವೀರಗಾಸೆ ಮತ್ತು ಗೋರವರ ಕುಣಿತದ ಭವ್ಯ ಪ್ರದರ್ಶನಗಳು ನಿವಾಸಿಗಳ ಕಣ್ಣುಮನ ಸೆಳೆದವು.
ಮೆರವಣಿಗೆಯ ನಂತರ ಅಪಾರ್ಟ್‌ಮೆಂಟ್ ಆವರಣದಲ್ಲಿ ನಾಡ ಧ್ವಜಾರೋಹಣ ನೆರವೇರಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರಾಮಾಂಜನೇಯ,ಶ್ರೀ ಪುರುಷೋತ್ತಮ್, ಶ್ರೀ ಆನಂದ ಹಾಗೂ ಶ್ರೀ ನೀಲಕಂಠ ಆಚಾರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿವಿಧ ಭಾಷೆ ಹಾಗೂ ಸಂಸ್ಕೃತಿಯ ಜನರು ಒಂದೆಡೆ ಸೇರಿ ಕನ್ನಡ ನಾಡು-ನುಡಿಯ ಗೌರವವನ್ನು ಸಾರುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಪಾರ್ಟ್‌ಮೆಂಟ್‌ನ ಮಕ್ಕಳು ಹಾಗೂ ಹಿರಿಯ ನಿವಾಸಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿದರು. ‘ಸರಿಗಮಪ’ ಖ್ಯಾತಿಯ ಗಾಯಕರಿಂದ ಆಯೋಜಿಸಲಾಗಿದ್ದ ಸುಗಮ ಸಂಗೀತ ಮತ್ತು ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು.
ಈ ವರ್ಣರಂಜಿತ ಕಾರ್ಯಕ್ರಮದ ಯಶಸ್ಸಿಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ರಾಮ್ ಸಿಂಗ್ ಕುಶ್ವಾಹ, ಶ್ರೀ ಶಾಂತಿನಾಥ ಕದಂ, ರವೀಂದ್ರ, ಧರ್ಮಗೌಡ ವಿ.ಪಿ., ತಿಪ್ಪೇಸ್ವಾಮಿ, ಮಹೇಶ್, ಶ್ರೀಶೈಲ್ ಸೇರಿದಂತೆ ಹಲವು ಮುಖಂಡರು ಹಾಗೂ ನಿವಾಸಿಗಳು ಶ್ರಮಿಸಿದರು.
ಅಪಾರ್ಟ್‌ಮೆಂಟ್‌ನ ಎಲ್ಲಾ ನಿವಾಸಿಗಳ ಒಗ್ಗಟ್ಟು ಮತ್ತು ಕನ್ನಡಾಭಿಮಾನಕ್ಕೆ ಈ ಆಚರಣೆ ಸಾಕ್ಷಿಯಾಯಿತು.