ಕೆ.ಆರ್ ಪುರ: ಶಾಸಕ ಬೈರತಿ ಬಸವರಾಜ ಅವರನ್ನು ಟಿನ್ ಫ್ಯಾಕ್ಟರಿ ಬಳಿ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಅಭಿವೃದ್ಧಿ ಕಾರ್ಯ ಪರಿಶೀಲನೆ ವೇಳೆ ಅವ್ಯಾಚ ಪದಗಳಿಂದ ನಿಂದಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರ ವಿರುದ್ಧ ಕೆಆರ್ ಪುರ ಕ್ಷೇತ್ರಾದ್ಯಂತ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಸಚಿವರ ಬಳಿ ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರೆ ರೌಡಿಗಳ ಮಾದರಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಾಷಸ್ವಾಮಿ ಅವರು ಮುನ್ನುಗ್ಗಿ ಹೊಡೆಯಲು ಬರುತ್ತಿದ್ದಾರೆ. ಇಲ್ಲಿ ಸಮಸ್ಯೆ ಹೇಳಿಕೊಳ್ಳಲೇ ಬಾರದೆ ಸರ್ಕಾರ ಅವರದು ಇದೆ ಎಂದು ದೌರ್ಜನ್ಯ ಮಾಡುತ್ತಿದ್ದಾರೆಯೇ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಶಾಸಕ ಬೈರತಿ ಬಸವರಾಜರವರು ಹಲವು ಬಾರಿ ಹೇಳಿದರೂ ಸಹ ನಾರಾಯಣಸ್ವಾಮಿ ಯವರ ಈ ದುರ್ವರ್ತನೆ ಅಭಿವೃದ್ಧಿ ಯಲ್ಲಿ ರಾಜಕೀಯಕ್ಕೆ ಪ್ರೇರೆಪಿಸಿದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್ ಮಾತನಾಡಿ, ಎಂಎಲ್‌ಸಿ ಅಂತಾರೆ , ಇವರು ಮಾಜಿ ಎಂಎಲ್‌ಸಿ ಎಂಬುದನ್ನು ಮರೆತಿದ್ದಾರೆ. ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರೆ ದೌರ್ಜನ್ಯ ಮಾಡುತ್ತಾರೆ ಎಂದು ಆರೋಪಿಸಿದರು.
ಬೈರತಿ ಬಸವರಾಜರವರು ಗಲಬೆಗೆ ಪ್ರಚೋದನೆ ನೀಡುವವರಲ್ಲ. ಇಲ್ಲದಿದ್ದರೆ ನೀವು ಆಡಿದ ಮಾತಿಗೆ ಸ್ಥಳದಲ್ಲಿಯೇ ಬಿಜೆಪಿ ಕಾರ್ಯಕರ್ತರು ಆಗಮಿಸಿ ಉತ್ತರ ನೀಡುತ್ತಿದ್ದರು ಎಂದು ಹೇಳಿದರು.

ಸಮಸ್ಯೆ ಹೇಳಿಕೊಂಡವರು ಕುಡಿದು ಮಾತಮಾಡಿದ್ದಾರೆ ಅಂತ ಹೇಳಿದ್ದೀರ ಅವರು ಕುಡಿದಿರುವುದನ್ನು ನೀವು ಪ್ರೂ ಮಾಡಿ ನೀವು ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ. ಸಮಸ್ಯೆ ಹೇಳಿಕೊಂಡರೆ ಕುಡುಕರು ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದೇ ಇದ್ದರೆ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಬೀದಿಗಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಪ್ರದೀಪ್ ಗೌಡ ಮಾತನಾಡಿ, ಒಬ್ಬ ಶಾಸಕರಿಗೆ ಗೌರವ ಕೊಡುವ ಸಂಸ್ಕೃತಿಯನ್ನು ಕಾಂಗ್ರೆಸ್ ಪಕ್ಷ ಕಲಿಸಿರುವುದು ಇದೆನಾ, ಇವರ ದೌರ್ಜನ್ಯಗಳಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದಬಾಬು, ಮಂಡಲ ಅಧ್ಯಕ್ಷ ಮುನೇಗೌಡ, ಪ್ರ.ಕಾರ್ಯದರ್ಶಿಗಳಾದ ಶ್ರೀರಾಮುಲು, ಲೋಕೇಶ್, ಮುಖಂಡರಾದ ಮಂಜುಳಾದೇವಿ, ಬಾಬುಸೆಲ್ವಂ, ಶಿವಣ್ಣ, ಇಟಾಚಿ ಮಂಜು, ಚನ್ನಸಂದ್ರ ಮುಖಂಡ ಮಂಜುನಾಥ್, ಬಾಬುಸಾಪಾಳ್ಯ ಮಂಜು, ರಾಮಲಕ್ಷ್ಮಣ್, ಬಚ್ಚೇಗೌಡ, ಇಲ್ಲುಬಾಬು, ಮುನಿಸ್ವಾಮಿ ಮತ್ತಿತರರಿದ್ದರು.