Wednesday, April 15, 2026
Home ಬೆಂಗಳೂರು ಗ್ರಾಮಾಂತರಹೊಸಕೋಟೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ; ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ವೇದಿಕೆ: ಡಾ. ಅಜಯ್ ಕುಮಾರ್ ಅಳಗೇಶನ

ಹೊಸಕೋಟೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ; ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ವೇದಿಕೆ: ಡಾ. ಅಜಯ್ ಕುಮಾರ್ ಅಳಗೇಶನ

by Raghavendra H A
0 comments

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆಯನ್ನು ಬೆಳೆಸಲು ‘ವಿಜ್ಞಾನ ವಸ್ತು ಪ್ರದರ್ಶನ’ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಎಂದು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಅಜಯ್ ಕುಮಾರ್ ಅಳಗೇಶನ್ ಅವರು ಹೇಳಿದರು.

ಹೊಸಕೋಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ವತಿಯಿಂದ ಆಯೋಜಿಸಿದ್ದ ”ವಿಜ್ಞಾನ ವಸ್ತು ಪ್ರದರ್ಶನ” ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾನೋ ತಂತ್ರಜ್ಞಾನ’ ಕ್ಷೇತ್ರದಲ್ಲಿ ಕೆಲಸದ ಅನುಭವ ಹಂಚಿಕೊಂಡು, ನ್ಯಾನೋ ಎಂದರೆ ಎಷ್ಟು ಚಿಕ್ಕದು ಗೊತ್ತೇ? ನಮ್ಮ ತಲೆಯ ಕೂದಲಿನ ಎಳೆಯನ್ನು ಲಕ್ಷ ಪಟ್ಟು ಸೀಳಿದರೆ ಸಿಗುವಷ್ಟು ಸೂಕ್ಷ್ಮವಾದ ವಸ್ತುಗಳ ಬಗ್ಗೆ ಇವರು ಸಂಶೋಧನೆಯನ್ನು ವಿವರಿಸಿದರು.

“ವಿಜ್ಞಾನವು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗಬಾರದು, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನವನ್ನು ಸುಲಭಗೊಳಿಸಬೇಕು” ಎಂದರು.

ತಮ್ಮ ಸಂಶೋಧನಾ ಕ್ಷೇತ್ರವಾದ ನ್ಯಾನೋ ತಂತ್ರಜ್ಞಾನ ಮತ್ತು ಶಕ್ತಿ ಸಂರಕ್ಷಣೆ (Energy Harvesting) ಕುರಿತು ವಿದ್ಯಾರ್ಥಿಗಳಿಗೆ ಸರಳವಾಗಿ ವಿವರಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಇರುವ ಅವಕಾಶಗಳನ್ನು ಪರಿಚಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮಚಂದ್ರಪ್ಪ ಬೇಗೂರು ಅವರು ವಹಿಸಿದ್ದರು.

ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಅವುಗಳಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ನ್ಯಾನೋ ಸೆನ್ಸರ್‌ಗಳು ಧರಿಸಬಹುದಾದ ಆರೋಗ್ಯ ಸಂವೇದಕಗಳ ಮಾದರಿಗಳು. ಮತ್ತು ಸ್ಮಾರ್ಟ್ ಕೃಷಿ: ಮಣ್ಣಿನ ತೇವಾಂಶ ಮತ್ತು ಸ್ವಯಂಚಾಲಿತ ನೀರಾವರಿ ಪದ್ಧತಿ. ಹಾಗೂ ಪರಿಸರ ಸ್ನೇಹಿ ಇಂಧನ: ಹೈಡ್ರೋಜನ್ ಕಾರುಗಳು ಮತ್ತು ಸೌರಶಕ್ತಿ ಚಾಲಿತ ಗೃಹೋಪಯೋಗಿ ಉಪಕರಣಗಳು. ಮತ್ತು ತ್ಯಾಜ್ಯ ನಿರ್ವಹಣೆ: ಪ್ಲಾಸ್ಟಿಕ್ ಮುಕ್ತ ಪರಿಸರ ಮತ್ತು ಕಸದಿಂದ ರಸ ಮಾಡುವ ತಂತ್ರಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಡಾ. ದಿನೇಶ್, ಮಂಜುನಾಥ್, ಉಮೇಶ್ ರೆಡ್ಡಿ, ವಿಶ್ವೇಶ್ವರಯ್ಯ ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು.

You may also like

Leave a Comment