ಕೆಆರ್ ಪುರ :ಶ್ರೀರಾಮನವಮಿ ಹಬ್ಬವು ಸತ್ಯ, ಧರ್ಮ ಮತ್ತು ಸೇವೆಯ ಸಂಕೇತವಾಗಿದೆ ಎಂದು ಸಮಾಜ ಸೇವಕ ಎಂಎಲ್‌ಡಿಸಿ ಮುನಿರಾಜ್ ತಿಳಿಸಿದರು.
ರಾಮಮೂರ್ತಿನಗರ ಓಲ್ಡ್ ಪೊಲೀಸ್ ಸ್ಟೇಷನ್ ಸಮೀಪದ ಹನುಮಂತನ ವಿಗ್ರಹ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಹಾಗೂ ರಾಮನವಮಿ ಹಬ್ಬದ ಪ್ರಯುಕ್ತ ಪಾನಕ ಮಜ್ಜಿಗೆ ಅನ್ನಪ್ರಸಾದ ವಿತರಣೆ ಮಾಡಿ ಮಾತನಾಡಿದರು
ಶ್ರೀರಾಮನವಮಿ ಹಬ್ಬವು ಸತ್ಯ, ಧರ್ಮ ಮತ್ತು ಸೇವೆಯ ಸಂಕೇತವಾಗಿದೆ. ಶ್ರೀರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸುಧಾರಣೆ ಸಾಧ್ಯ. ಹಬ್ಬದ ದಿನಗಳಲ್ಲಿ ಇಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಮಾನವೀಯ ಮೌಲ್ಯಗಳು ಬಲಪಡುತ್ತವೆ ಎಂದು ಹೇಳಿದರು.
ಹಬ್ಬಗಳು ಕೇವಲ ಸಂಪ್ರದಾಯಗಳಿಗೆ ಸೀಮಿತವಾಗದೇ, ಸಮಾಜದಲ್ಲಿ ಒಗ್ಗಟ್ಟು ಮತ್ತು ಸಹಾನುಭೂತಿ ಬೆಳೆಸುವ ವೇದಿಕೆಯಾಗಬೇಕು. ಧರ್ಮಗಳ ನಡುವಿನ ಸೌಹಾರ್ದತೆಯನ್ನು ಉತ್ತೇಜಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ರಸ್ತೆ ಮೂಲಕ ಸಂಚರಿಸುತ್ತಿದ್ದ ಪ್ರಯಾಣಿಕರು, ವ್ಯಾಪಾರಿಗಳು ಹಾಗೂ ಭಕ್ತರು ತಂಪು ಪಾನೀಯಗಳನ್ನು ಸ್ವೀಕರಿಸಿ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.
ಶಾಸಕ ಬೈರತಿ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಮಾಡುತ್ತಿದ್ದು , ಮುಂದಿನ ಜಿಬಿಎ ಚುನಾವಣೆಯಲ್ಲಿ ಮತದಾರರು ಬಿಜೆಪಿಯ ಕೈ ಹಿಡಿಯಲಿ ಎಂದು ಹೇಳಿದರು.
ಈ ವೇಳೆ ಸ್ಥಳೀಯರಾದ ಸುಕುಮಾರ್ , ಜೈ ಹನುಮಾನ್ ಆಟೋ ಸ್ಟ್ಯಾಂಡ್ ಸದಸ್ಯರು ಇತರರಿದ್ದರು.
