ನೆಲಮಂಗಲ: ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಹಳೇ ನಿಜಗಲ್‌ನಲ್ಲಿ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ.
ಅಡಿಕೆ ತೋಟದ ಪಕ್ಕದಲ್ಲಿ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆಗಳು ಸಿಕ್ಕಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯಹಿನ್ನೆಲೆ:
ಮೃತ ಮಹಿಳೆಯನ್ನು ತುಮಕೂರು ಮೂಲದ ಯಮುನಾ (35) ಎಂದು ಗುರುತಿಸಲಾಗಿದೆ. ಇವರಿಗೆ 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬುವವರೊಂದಿಗೆ ಮದುವೆ ಆಗಿತ್ತು, ಇಬ್ಬರು ಮಕ್ಕಳಿದ್ದಾರೆ. ಆದರೆ, ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಯಮುನಾ, ಪತಿಯನ್ನು ಬಿಟ್ಟು ಐದು ವರ್ಷಗಳ ಕಾಲ ದೊಡ್ಡಬಳ್ಳಾಪುರದಲ್ಲಿ ಆತನೊಂದಿಗೆ ವಾಸವಿದ್ದರು. ನಂತರ ತನ್ನ ತಪ್ಪಿನ ಅರಿವಾಗಿ ಎರಡು ವರ್ಷಗಳ ಹಿಂದೆ ಮರಳಿ ಪತಿಯ ಮನೆಗೆ ಬಂದು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಕಳೆದ ಮಾರ್ಚ್ 21ರಂದು ಯಮುನಾ ಅವರ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ “ಒಮ್ಮೆ ಭೇಟಿಯಾಗು” ಎಂದು ರಾಘವೇಂದ್ರ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಆತನನ್ನು ಭೇಟಿ ಮಾಡಲು ಹೋದ ಯಮುನಾ ಅಂದಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು.
ಗುರುತುಪತ್ತೆಯಾಗಿದ್ದುಹೇಗೆ?
ಆದರೆ ಇದೀಗ ಹಳೇ ನಿಜಗಲ್ ಗ್ರಾಮದ ಅಡಿಕೆ ತೋಟದ ಬಳಿ ಮೂಳೆಗಳು ಪತ್ತೆಯಾಗಿದೆ. ಅದರ ಪಕ್ಕದಲ್ಲೇ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಕೂಡ ಪೊಲೀಸರಿಗೆ ಸಿಕ್ಕಿದೆ. ಇದರ ಆಧಾರದ ಮೇಲೆ ಪೊಲೀಸರು ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಕುಟುಂಬಸ್ಥರು ಅದು ಯಮುನಾ ಅವರದ್ದೇ ಎಂದು ಗುರುತಿಸಿದ್ದಾರೆ.
ರಾಘವೇಂದ್ರ ಎಂಬಾತನೇ ಯಮುನಾಳನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ದಾಬಸ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.