Tuesday, June 9, 2026
Home ಬೆಂಗಳೂರು ನಗರಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಪರಿಶೀಲನೆ. ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ:ರಮೇಶ್.ಡಿ.ಎಸ್

ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಪರಿಶೀಲನೆ. ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ:ರಮೇಶ್.ಡಿ.ಎಸ್

by Dharmaraju
0 comments

ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿ ಹಾಗೂ ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ  ಪ್ರಗತಿ ಕುರಿತು ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್.ಡಿ.ಎಸ್  ರವರು ಸ್ಥಳ ಪರಿಶೀಲನೆ ನಡೆಸಿದರು.

ರೈಲ್ವೆ ವೆಂಟ್ ಬಾಕಿ 12 ಮೀಟರ್ ಬಾಕ್ಸ್ ಪುಶಿಂಗ್   ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ

ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿಯ ಭಾಗವಾಗಿ ಬಾಕಿ ಇರುವ ಸುಮಾರು 12 ಮೀಟರ್ ಬಾಕ್ಸ್ ಪುಶಿಂಗ್ ಕಾಮಗಾರಿಯನ್ನು ಮೇ 31ರೊಳಗೆ ಪೂರ್ಣಗೊಳಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾಮಗಾರಿ ಶೀಘ್ರ ಪೂರ್ಣಗೊಂಡಲ್ಲಿ ತಕ್ಷಣವೇ ರಿಟೈನಿಂಗ್ ವಾಲ್ ನಿರ್ಮಾಣ ಕೈಗೊಂಡು, ರೈಲ್ವೆ ವೆಂಟ್ ಮೂಲಕ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದರೊಂದಿಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉಂಟಾಗುತ್ತಿದ ನೆರೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಮಳೆ ನೀರು ಕಾಲುವೆಗಳ ಹೂಳು ತೆರವು ಕಾಮಗಾರಿಗಳ ಪರಿಶೀಲನೆ

ಗೆದ್ದಲಹಳ್ಳಿ ಬಳಿ ರಾಜಕಾಲುವೆಯಲ್ಲಿ  ವಾರ್ಷಿಕ ನಿರ್ವಹಣಾ ಕಾಮಗಾರಿಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮಳೆ ನೀರು ಕಾಲುವೆಗಳ ಹೂಳು ತೆರವು ಮತ್ತು ಸ್ವಚ್ಛತಾ ಕಾಮಗಾರಿಗಳ ಪ್ರಗತಿಯನ್ನು ಆಯುಕ್ತರು ಪರಿಶೀಲಿಸಿ ಯುದ್ದೋಪಾದಿಯಲ್ಲಿ ಕಾಲುವೆ ನಿರ್ವಹಣಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.

ಮಳೆಗಾಲದ ಸಂದರ್ಭದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗದಂತೆ ಪ್ರಮುಖ ರಸ್ತೆಗಳ ಎರಡೂ ಬದಿಗಳಿಂದ ಮಳೆ ನೀರು ಕಾಲುವೆಗೆ ಸಂಪರ್ಕ ಕಲ್ಪಿಸುವ ಚರಂಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವಜ್ಞನಗರ ಗಡಿಭಾಗದಲ್ಲಿನ ಕಾಮಗಾರಿಗಳ ಪರಿಶೀಲನೆ

ಪೂರ್ವ ನಗರ ಪಾಲಿಕೆಗೆ ಹೊಂದಿಕೊಂಡಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಗಡಿಯ ಮೇಲ್ಭಾಗದ ಕಾಲುವೆಯಿಂದ ಗೆದ್ದಲಹಳ್ಳಿ ಕಾಲುವೆಗೆ ಸಂಪರ್ಕವಿದ್ದು ಮೇಲ್ಭಾಗದಲ್ಲಿರುವ ಕಾಲುವೆ ಹೂಳು ಕೆಳಭಾಗಕ್ಕೆ ಹರಿದು ಬರುವುದರಿಂದ ನೆರೆ ಪರಿಸ್ಥಿತಿ ಉಂಟಾಗಬಹುದಾಗಿದ್ದು ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾಲುವೆ ನಿರ್ವಹಣಾ ಕಾಮಗಾರಿಗಳನ್ನೂ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಮಳೆಗಾಲದ ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿನ ಹೂಳು ತೆರವು, ಕಾಲುವೆ ಸ್ವಚ್ಛತೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ

ಮಳೆಗಾಲ ಆರಂಭಕ್ಕೂ ಮುನ್ನ ಪ್ರವಾಹ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಮೂಲಕ ಕಾಲುವೆಗಳಲ್ಲಿನ ಹೂಳು, ತ್ಯಾಜ್ಯ, ಕಳೆ ಗಿಡಗಳನ್ನು ತೆರವು ಮಾಡಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸ್ಥಳ ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ ಬಿ.ಎನ್., ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

You may also like

Leave a Comment