ಕೆ.ಆರ್ ಪುರ: ಸಚಿವ ಕೃಷ್ಣಭೈರೇಗೌಡರ ಮುಂದೆ ನಡೆದಿದ್ದ ಶಾಸಕ ಬೈರತಿ ಹಾಗೂ ಮಾಜಿ ಶಾಸಕ ನಾರಾಯಣಸ್ವಾಮಿ ನಡುವಿನ ವಾಗ್ವಾದದಲ್ಲಿ ಕಾಂಗ್ರೆಸ್ ಮುಖಂಡರಿಗೆ ಶಾಸಕ ಬೈರತಿ ಬಸವರಾಜ ನಿಂದನೆ ಮಾಡಿದ್ದು,ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಎಂ. ಮಂಜುನಾಥ ಅವರು ಮಾಜಿ ಶಾಸಕರಾದ ನಾರಾಯಣಸ್ವಾಮಿ ಅವರಿಗೆ ಏಕವಚನದಲ್ಲಿ ನಿಂದನೆ ಮಾಡಿರುವುದು ಖಂಡನೀಯ ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನುಡಿದರು.
ನಮ್ಮ ನಾಯಕರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ಮಾಡಲಾಗಿದೆ ಕಾಂಗ್ರೆಸ್ ಕಾರ್ಯಕರ್ತರನ್ನು ಗುಂಡಾಗಳು ಎಂದು ಹೇಳಿರುವುದು ಖಂಡನೀಯ ಎಂದು ಹೇಳಿದರು.

ಕಳೆದ 15 ವರ್ಷ ಗಳಿಂದ ಶಾಸಕರಾಗಿ,ಸಚಿವರಾಗಿದ್ದ ಅವರು ಕ್ಷೇತ್ರಕ್ಕೆ ಸುಮಾರು 3 ಸಾವಿರ ಕೋಟಿ ರೂಪಾಯಿ ಅನುದಾನ ತಂದಿದ್ದಾರೆ.ಆ ದುಡ್ಡು ಏನಾಯಿತು,ಕ್ಷೇತ್ರದಲ್ಲಿ ಯಾವುದಾದರೂ ಒಂದು ಶಾಶ್ವತ ಯೋಜನೆ ಮಾಡಿದ್ದಾರ ಎಂದು ಪ್ರಶ್ನೆ ಮಾಡಿದರು.ಶಾಸಕರಾಗಿ ವರ್ಷ ಪೂರ್ತಿ ರಸ್ತೆಗಳಿಗೆ ಥಾರ್ ಹಾಕಿಸುವ ಕೆಲಸ ಬಿಟ್ಟರೆ ಯಾವುದು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬೈರತಿ ಬಸವರಾಜ ಅವರು ಯಾವುದೇ ಶಾಶ್ವತ ಕಾಮಗಾರಿ ಮಾಡಿಲ್ಲ, ಸಚಿವರಾದ ಸಂದರ್ಭದಲ್ಲೂ ಸಹ ಯಾವುದೇ ಕಾಮಗಾರಿ ಮಾಡದೇ ಇರುವುದು ಶಾಸಕ ಸ್ಥಾನಕ್ಕೆ ಮಾಡಿರುವ ಅಪಮಾನ,ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊದಂಡರಾಮ,ಸಿ.ವೆಂಕಟೇಶ್,
ಗ್ಯಾರಂಟಿ ಅಧ್ಯಕ್ಷ ಜಯರಾಮ್,ಯುವಘಟಕದ ಕ್ರೀಡಾ ಹಾಗೂ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಭರತ್ ಯಾದವ್ ಮುಖಂಡರಾದ ಅಗರ ಪ್ರಕಾಶ್,ಜಯಂತಿಗರ ಮುನಿರಾಜು, ಪ್ರಸನ್ನ, ಖಲೀವುಲ್ಲಾ,ಶೈಲಾಜಾ ಪಟೇಲ್ ಇದ್ದರು.