ದೊಡ್ಡಬಳ್ಳಾಪುರ : ಪ್ರತಿ ವಾರ್ಡ್ಗಳಲ್ಲಿಯೂ ಉದ್ಯಾನವನ ಅಭಿವೃದ್ಧಿ ಮಾಡುವುದರಿಂದ ಆಯಾ ಭಾಗದ ಜನತೆಗೆ ವೃದ್ಧರಿಗೆ ವಾಕಿಂಗ್ ಮತ್ತು ಕೆಲಕಾಲ ಸ್ನೇಹಿತರೊಂದಿಗೆ ಕಾಲಕ್ಷೇಪ ಮಾಡಲು ಅನುಕೂಲವಾಗುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದ ಕೆಂಪೇಗೌಡರ ನಗರದಲ್ಲಿ ಬುಧವಾರ ಫಾಕ್ಸ್ಕಾನ್ ಸಿಎಸ್ಆರ್ ನಿಧಿಯಡಿ ನೂತನವಾಗಿ ಅಭಿವೃದ್ಧಿಪಡಿಸಿದ ಉದ್ಯಾನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಾಗರಕೆರೆ ಅಭಿವೃದ್ಧಿಗೂ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಫಾಕ್ಸ್ಕಾನ್ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಮಾತನಾಡಿ, ತಾಲೂಕಿನಲ್ಲಿ ವಿವಿಧ ಕಂಪನಿಗಳು ತಲೆಎತ್ತುತ್ತಿವೆ. ನಿಯಾಮನುಸಾರ ಕಂಪನಿಗಳು ಸಿಎಸ್ಆರ್ ನಿಧಿಯನ್ನು ತೆಗೆದಿಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕು. ಇಂದು ಏಳನೇ ವಾರ್ಡ್ನಲ್ಲಿ 5 ಲಕ್ಷ ರೂ. ಮೊತ್ತದಲ್ಲಿ ಪಾಳುಬಿದ್ದ ಜಾಗದಲ್ಲಿ ಸುಂದರ ಉದ್ಯಾನವನ ಅಭಿವೃದ್ಧಿಪಡಿಸಲಾಗಿದೆ. ನಗರಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ನಗರಸಭೆಯಿಂದ ಯಾವುದೇ ಷರತ್ತುಗಳಿಲ್ಲದೆ ಕಂಪನಿಗಳ ಜತೆ ಕೈಜೋಡಿಸಿ ಕೆಲಸ ಮಾಡಲಾಗುವುದು ಎಂದರು.
ಪಿಆರ್ಒ ಮಧುಮಿತ, ಸಿಬ್ಬಂದಿ ಭರತ್ ದಂಡಿ, ಪರ್ಲ್, ಕೃಷ್ಣಪ್ರಸಾದ್, ರಾಮಕೃಷ್ಣ, ಉದ್ಯಾನವನ ಅಭಿವೃದ್ಧಿ ಪಡಿಸಿದ ರೇಣುಕಾ ಪ್ರಸಾದ್ ಇದ್ದರು.