Tuesday, June 9, 2026
Home ರಾಜಕೀಯ ‌ಸುದ್ದಿಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಪ್ರದೀಪ್ ಈಶ್ವರ್ : “ಮಗು ಅಳದೇ ತಾಯಿ ಊಟ ಮಾಡಿಸಲ್ಲ” ಎಂದ ಶಾಸಕ!

ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಪ್ರದೀಪ್ ಈಶ್ವರ್ : “ಮಗು ಅಳದೇ ತಾಯಿ ಊಟ ಮಾಡಿಸಲ್ಲ” ಎಂದ ಶಾಸಕ!

by Dharmaraju
0 comments

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಮ್ಮ ಸಚಿವ ಸ್ಥಾನದ ಆಕಾಂಕ್ಷೆಯನ್ನು ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ. ಈ ಸಂಬಂಧ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಅವರು ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ಕುತೂಹಲ ಮೂಡಿಸಿದೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, “ರಾಜಕೀಯದಲ್ಲಿ ಇರುವ ಯಾರಿಗಾದರೂ ಅಧಿಕಾರ ಪಡೆಯುವ ಹಂಬಲ ಇರುವುದು ಸಹಜ. ಮಗು ಅಳದಿದ್ದರೆ ತಾಯಿ ಕೂಡ ಕೈತುತ್ತು ನೀಡಲ್ಲ, ಹಾಗೆಯೇ ನಾವು ಕೇಳದಿದ್ದರೆ ಮಂತ್ರಿ ಸ್ಥಾನ ಸಿಗಲ್ಲ. ಅದಕ್ಕಾಗಿಯೇ ನಾನು ಹೈಕಮಾಂಡ್ ಬಳಿ ಸಚಿವ ಸ್ಥಾನ ಕೇಳಲು ದೆಹಲಿಗೆ ಹೋಗುತ್ತಿದ್ದೇನೆ” ಎಂದು ತಮ್ಮದೇ ಶೈಲಿಯಲ್ಲಿ ಮಾರ್ಮಿಕವಾಗಿ ಉತ್ತರಿಸಿದರು.

ನೀಟ್ (NEET) ಅಕ್ರಮದ ಬಗ್ಗೆ ಆಕ್ರೋಶ
ಇದೇ ವೇಳೆ ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಸುಮಾರು 25 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಪೇಪರ್ ಲೀಕ್‌ನಿಂದಾಗಿ ದಕ್ಷಿಣ ಭಾರತದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರ ಮಟ್ಟದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಯಾರ ವೈಫಲ್ಯ ಕಾರಣ ಎಂದು ಪ್ರಶ್ನಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಶಾಸಕ
ಕರ್ನಾಟಕದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಪ್ರದೀಪ್ ಈಶ್ವರ್, “ವಿದ್ಯಾರ್ಥಿಗಳೇ ಯಾರೂ ಭಯಪಡಬೇಡಿ. ಮರು ಪರೀಕ್ಷೆ ನಡೆದರೂ ಮತ್ತೆ ಫೀಸ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಶ್ರಮಕ್ಕೆ ಖಂಡಿತ ನ್ಯಾಯ ಸಿಗಲಿದೆ, ಮಾನಸಿಕವಾಗಿ ಸಿದ್ಧರಾಗಿರಿ” ಎಂದು ಕರೆ ನೀಡಿದರು.

ಒಂದು ಕಡೆ ಮಂತ್ರಿಗಿರಿಗಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾಗಿರುವ ಪ್ರದೀಪ್ ಈಶ್ವರ್, ಇನ್ನೊಂದೆಡೆ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ


You may also like

Leave a Comment