ಕೆ.ಆರ್.ಪುರ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಮಗಳೇ ಅಪ್ಪ, ಅಮ್ಮ ಹಾಗೂ ತಂಗಿಯನ್ನು ಭೀಕರವಾಗಿ ಕೊಲೆ ಮಾಡಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಹೃದಯವಿದ್ರಾವಕ ಘಟನೆ ಕೆಆರ್‌ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆರಾತ್ರಿ ನಡೆದಿದೆ.
ಸೋಮಸುಂದರ್(52),ಅವರ ಪತ್ನಿ ಮುತ್ತುಲಕ್ಷ್ಮೀ(48) ಹಾಗೂ ಪುತ್ರಿ ಸುಪ್ರಿಯಾ(19) ಕೊಲೆಯಾದವರು ಎಂದು ಗುರುತಿಸಲಾಗಿದೆ.
ಈ ಮೂವರನ್ನು ಹಿರಿಯ ಮಗಳು ಶ್ವೇತಾ ಮತ್ತು ಆಕೆಯ ಪ್ರಿಯಕರ ಕೇತನ್ ಸೇರಿಕೊಂಡು ಹತ್ಯೆ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.
ಹಿರಿಯ ಮಗಳು ಶ್ವೇತಾ ತನ್ನ ಪ್ರಿಯಕರ ಕೇತನ್ ಜೊತೆ ಕೆ.ಆರ್.ಪುರದ ಆರ್ ಟಿಓ ಕಚೇರಿಯ ಪಕ್ಕದ ರಸ್ತೆ ಶ್ರೀ ಶಿರಡಿ ಸಾಯಿ ಬಡಾವಣೆ ಎರಡನೇ ಮುಖ್ಯ ರಸ್ತೆಯ ಸಾಯಿ ಗ್ರೀನ್ ಅಪಾರ್ಟ್‌ಮಂಟ್‌ನಲ್ಲಿ ಲಿವ್‌ಇನ್ ರಿಲೇಶನ್‌ನಲ್ಲಿದ್ದರು. ಇವರ ಸಂಬಂಧಕ್ಕೆ ಶ್ವೇತಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹಲವಾರು ಬಾರಿ ಮಗಳಿಗೆ ಬುದ್ದಿ ಹೇಳಿದರೂ ಕೇಳಿರಲಿಲ್ಲ. ಪೋಷಕರು ಹಾಗೂ ಕಿರಿಯ ಮಗಳು ಸುಪ್ರಿಯಾ ಕಳೆದ ರಾತ್ರಿ ಸುಮಾರು 9.30 ರಿಂದ 10 ಗಂಟೆ ಸುಮಾರಿನಲ್ಲಿ ಹಿರಿಯ ಮಗಳು ವಾಸವಿದ್ದ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾರೆ.

ಆ ಸಂದರ್ಭದಲ್ಲಿ ಮನೆಗೆ ಬಂದಿದ್ದ ಪೋಷಕರ ಜೊತೆ ಮಗಳು ಹಾಗೂ ಆಕೆಯ ಪ್ರಿಯಕರ ಕೇತನ್ ಸೇರಿಕೊಂಡು ಜಗಳವಾಡಿದ್ದಾರೆ.ಇವರ ಮನೆಯಲ್ಲಿ ಜೋರು ಗಲಾಟೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಅಕ್ಕಪಕ್ಕದವರು ಪ್ರತಿದಿನ ಇದು ನಡೆಯುತ್ತಿರುತ್ತದೆ ಎಂದು ಸುಮನಾಗಿದ್ದಾರೆ.
ಆದರೆ ಕೆಲ ಸಮಯದ ಬಳಿಕ ಗಾಬರಿಯಿಂದ ಅಪಾರ್ಟ್‌ಮೆಂಟ್‌ನಿಂದ ಶ್ವೇತಾ ಮತ್ತು ಯುವಕ ಓಡಿ ಹೋಗುತ್ತಿರುವುದನ್ನು ನೋಡಿ ಸ್ಥಳೀಯರು ಏನಾಗಿದೆ ಎಂದು ತಿಳಿಯದೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆಆರ್‌ಪುರಂ ಠಾಣೆ ಪೊಲೀಸರು ಮನೆಯೊಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಮೂವರು ಕೊಲೆಯಾಗಿ ಬಿದ್ದಿರುವುದನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಳೆದ ಹಲವು ದಿನಗಳಿಂದ ಕೇತನ್‌ನನ್ನು ಪ್ರೀತಿಸುತ್ತಿದ್ದ ಶ್ವೇತಾ ನಮಗೆ ಮದುವೆ ಮಾಡುವಂತೆ ಹಾಗೂ ಆಸ್ತಿಯಲ್ಲಿ ಭಾಗ ಕೊಡಬೇಕೆಂದು ಪೋಷಕರಿಗೆ ಪೀಡಿಸುತ್ತಿದ್ದರು. ಈ ವಿಚಾರವಾಗಿ ತಂದೆ ಸೋಮಸುಂದರ್ ನಿರಾಕರಿಸಿ ಮನೆಯಿಂದ ಅವರನ್ನು ಹೊರಗೆ ಹೋಗುವಂತೆ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ.
ಇದೇ ಕೋಪದಿಂದ ಅವರು ಸಂಚು ಮಾಡಿಕೊಂಡು ನಿನ್ನೆ ರಾತ್ರಿ ಇದೇ ವಿಚಾರವಾಗಿ ಪೋಷಕರೊಂದಿಗೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೇತನ್ ಚಾಕುವಿನಿಂದ ಮೊದಲು ಸೋಮಸುಂದರ್ ಅವರಿಗೆ ಹಲವು ಬಾರಿ ಇರಿದಿದ್ದಾನೆ. ಇದನ್ನು ಕಂಡ ಪತ್ನಿ ಮುತ್ತುಲಕ್ಷ್ಮೀ ತಡೆಯಲು ಮಧ್ಯೆ ಹೋದಾಗ ಅವರ ಮೇಲೆಯೂ ಕೂಡ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದಾಗ ತೀವ್ರರಕ್ತಸ್ರಾವವಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಏನಾಗುತ್ತಿದೆ ಎಂದು ನೋಡಲು ಕೋಣೆಯಿಂದ ಬಂದ ಮತ್ತೊಬ್ಬ ಪುತ್ರಿ ಸುಪ್ರಿಯಾ ಕಣ್ಣಮುಂದೆ ಅಪ್ಪ, ಅಮ ಕುಸಿದು ಬಿದ್ದಿದ್ದನ್ನು ನೋಡಿ ಕೂಗಿಕೊಂಡಿದ್ದಾಳೆ. ಈ ವೇಳೆ ಒಡಹುಟ್ಟಿದವಳೇ ಆಕೆಯ ಮೇಲೂ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗುವ ವೇಳೆ ಕೇತನ್ ಆಕೆಗೂ ಸಹ ಚಾಕುವಿನಿಂದ ಇರಿದಿದ್ದರಿಂದ ಆಕೆಯೂ ಸಾವನ್ನಪ್ಪಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಿಂದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.ಪ್ರಿಯಕರನ ಜೊತೆ ಸೇರಿ ಹೆತ್ತ ತಂದೆ, ತಾಯಿ ಹಾಗೂ ಒಡಹುಟ್ಟಿದ ಸಹೋದರಿಯನ್ನೇ ದಾರುಣವಾಗಿ ಕೊಲೆ ಮಾಡಿ ಇಡೀ ಕುಟುಂಬವೇ ಸರ್ವನಾಶ ಮಾಡಿಬಿಟ್ಟಳಾ ಹಿರಿಯ ಮಗಳು ಎಂದು ಜನರು ಹಿಡಿ ಶಾಪ ಹಾಕಿದ್ದಾರೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ ಎಂದು ಕಂಬನಿ ಮಿಡಿದಿದ್ದಾರೆ.
ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಬೀರ್ ಬಹಾದೂರ್ ನೀಡಿದ ಮಾಹಿತಿಯಂತೆ, ಮೃತರು ಭಾನುವಾರ ಸಂಜೆ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದು, ನಂತರ ನಡೆದ ಘಟನೆ ಕುರಿತು ರಾತ್ರಿ ವೇಳೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ
ಸದ್ಯಕ್ಕೆ ಕೆ.ಆರ್. ಪುರಂ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶಂಕಿತ ಆರೋಪಿಗಳಾದ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಇಬ್ಬರ ಮೊಬೈಲ್ ಕರೆಗಳ ವಿವರ (CDR) ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಲಾಗುತ್ತಿದ್ದಾರೆ.